ʼ2 ಬಿʼ ಗುತ್ತಿಗೆದಾರರಿಗೆ ಮೀಸಲಾತಿ ವಿಧೇಯಕ ಕುರಿತು ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು : 2 ಬಿ ವರ್ಗದ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ವಿಧೇಯಕ ಕುರಿತು ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಬಿ ವರ್ಗದ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕರಾಜ್ಯಪಾಲರಿಂದ ವಾಪಸ್ ಬಂದಿದೆ ಎಂಬುದನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇದರ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.
ಬೆಂಗಳೂರು ಅರಮನೆ ಜಾಗದ ಟಿಡಿಆರ್ ನೀಡುವ ಸಂಬಂಧ ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರಿಸಲಿದೆ.ಜತೆಗೆ, ಕೋರ್ಟ್ ನಲ್ಲಿ ನಮ್ಮ ವಾದವನ್ನು ನಾವು ಮಾಡುತ್ತೇವೆ. ಇಲ್ಲಿಯವರೆಗೆ ನಾಲ್ಕು ಆದೇಶಗಳು ಬಂದಿವೆ. ಇದೆಲ್ಲವನ್ನು ಮತ್ತೆ ಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.
ಅರಮನೆ ಮೈದನಾನಕ್ಕೆ ಸಂಬಂಧಿಸಿದಂತೆ 3400 ಕೋಟಿ ರೂ. ಟಿಡಿಆರ್ ನೀಡುವ ಸುಪ್ರೀಂ ಕೋರ್ಟಿನ ಸಲಹೆಗೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿಚಾರದ ವಿಚಾರಣೆ ನಡೆಯುತ್ತಲೇ ಇದೆ. 15 ಎಕರೆಗೆ 3400 ಕೋಟಿ ರೂ. ಕೊಡುವುದು ಸರಿಯಲ್ಲ, ಇದು ಅವೈಜ್ಞಾನಿಕ ಬೆಲೆ ಇದ್ದಂತೆ. ಒಮ್ಮೆ ಈ ರೀತಿ ಕೊಟ್ಟರೆ ಬೇರೆಯದಕ್ಕೂ ಇದು ಅನ್ವಯವಾಗುತ್ತದೆ. ಅರಮನೆಯ 400 ಎಕರೆ ಭೂಮಿಯನ್ನು ಕಾನೂನು ಪ್ರಕಾರವೇ ತೆಗೆದುಕೊಂಡಿದ್ದೇವೆ. 11 ಕೋಟಿ ರೂ.ಗಳನ್ನು ಅವತ್ತಿನ ಕಾಲದಲ್ಲೇ ನೀಡಲಾಗಿದೆ. ಇದನ್ನು ವಿರೋಧಿಸಿ ಅರಮನೆಯವರು ಕೋರ್ಟ್‍ಗೆ ಹೋಗಿದ್ದರು. ಈ ವಿಚಾರದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲ ಎಂದರು.
ಕಳೆದ 28 ವರ್ಷದಿಂದ ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯಾಗಿದೆ. ನಾಲ್ಕೈದು ದಿನದ ಹಿಂದೆ ಸುಪ್ರೀಂ ಕೋರ್ಟಿನ ಪೀಠ 3400 ಕೋಟಿ ರೂ. ಕೊಡುವಂತೆ ನಿರ್ಣಯ ನೀಡಿದೆ. ನಾವು ಸುಪ್ರೀಂ ಕೋರ್ಟಿಗೆ ಮನವರಿಕೆ ಪ್ರಯತ್ನ ಮಾಡಿದ್ದೆವು. ಈ ಮೊತ್ತ ತುಂಬಾ ದುಬಾರಿಯಾಗಿದೆ. ಇದು ನಮ್ಮ ಆಸ್ತಿಯಾಗಿರುವುದರಿಂದ ಟಿಡಿಆರ್ ಬರಲ್ಲ. ಆದರೂ ಟಿಡಿಆರ್ ಕೊಡಬೇಕು ಎಂದು ನ್ಯಾಯಾಲಯ ಹೇಳಿದ್ದು, ನಮ್ಮ ಮನವಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿತ್ತು.
ನಾವು ಈ ಬಗ್ಗೆ ಕಾನೂನನ್ನು ಜಾರಿಗೆ ತಂದಿದ್ದೆವು. ನಮಗೆ ಜಾಗವೇ ಬೇಡವೆಂದು ಹೇಳಿದ್ದವು. ಆದರೂ ಸುಪ್ರೀಂ ಕೋರ್ಟ್ ನಮ್ಮ ಮನವಿ ಪರಿಗಣಿಸದೇ ನೀವು ಕೊಡಲೇಬೇಕೆಂದು ವಿಭಾಗೀಯ ಪೀಠ ಆದೇಶ ನೀಡಿತ್ತು ಎಂದು ಸಚಿವರು ತಿಳಿಸಿದರು.