×
Ad

ಶಾಲಾ-ಕಾಲೇಜುಗಳಲ್ಲಿ ಸಮುದಾಯ ಬೆಂಬಲಿತ ಸ್ವಚ್ಛತಾ ಪದ್ಧತಿ ಅಳವಡಿಸಿ: ಡಾ.ನಿರಂಜನಾರಾಧ್ಯ

Update: 2023-12-29 19:30 IST

ಬೆಂಗಳೂರು: ಶಿಕ್ಷಕರು-ಮಕ್ಕಳು ಬಳಸುವ ಶೌಚಾಲಯಗಳನ್ನು ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು, ಎಸ್‍ಡಿಎಂಸಿ ಸಮಿತಿಗಳು ಸೇರಿ ಸ್ವಚ್ಛಗೊಳಿಸುವುದು ಕರ್ತವ್ಯಗಳ ಜೊತೆ ಜೊತೆಗೆ ಹಕ್ಕು ಎಂದು ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕ-ಸಮುದಾಯ ಬೆಂಬಲಿತ ಸ್ವಚ್ಛತಾ ಪದ್ಧತಿಯನ್ನು ಅಳವಡಿಸಬೇಕು ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ತಿಳಿಸಿದೆ.

ಶುಕ್ರವಾರ ವೇದಿಕೆಯ ಮಹಾ ಪೋಷಕ ಡಾ.ನಿರಂಜನಾರಾಧ್ಯ ವಿ.ಪಿ. ಪ್ರಕಟನೆ ಹೊರಡಿಸಿದ್ದು, ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು-ಮಕ್ಕಳು ಬಳಸುವ ಮೂತ್ರಾಲಯ-ಶೌಚಾಲಯಗಳನ್ನು ಹೊರಗಿನವರು ಅಥವಾ ಮೂರನೆಯವರು ಸ್ವಚ್ಛ ಮಾಡಬೇಕೆಂದು ಬಯಸುವುದು ಅಥವಾ ನಿರೀಕ್ಷಿಸುವುದು ಕೊಳಕು ಮನಸ್ಥಿತಿಯ ಅನಾವರಣವಾಗಿದೆ ಎಂದಿದ್ದಾರೆ.

ವರ್ಣಾಶ್ರಮ ಅಥವಾ ಜಾತಿ ಪದ್ಧತಿಯ ಮೂಲವೇ ಈ ಮನಸ್ಥಿತಿ. ಹೀಗಾಗಿ ಈ ಕೆಲಸಕ್ಕೆ ಸಹಾಯಕರು, ಜವಾನರು ಮತ್ತು ಸ್ಕಾವೆಂಜರ್ಸ್‍ನ್ನು ನೇಮಿಸಬೇಕೆಂದು ಬಯಸುವುದೂ ‘ನಾವು ಬಳಸುವ ಮೂತ್ರಾಲಯ-ಶೌಚಾಲಯಗಳನ್ನು ಬೇರೆಯವರು ಸ್ವಚ್ಛಗೊಳಿಸಬೇಕೆಂಬ ಮನೋಧೋರಣೆಯು ಕ್ರೂರ ಹಾಗು ಅರಸು-ಆಳು ಸಂಸ್ಕೃತಿಯ ಪ್ರತೀಕವಾಗುತ್ತದೆ ಎಂದು ಅವರು ಖಂಡಿಸಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರು-ಮಕ್ಕಳು ಬಳಸುವ ಮೂತ್ರಾಲಯ-ಶೌಚಾಲಯಗಳನ್ನು ಒಂದು ಸಮುದಾಯ, ವರ್ಗ, ಜಾತಿಯ ಮಕ್ಕಳಿಂದ ಸ್ವಚ್ಛಗೊಳಿಸುವ ಅಥವಾ ಸ್ವಚ್ಛಗೊಳಿಸಲು ಒತ್ತಾಯಿಸುವ ಕೆಲಸವನ್ನು ಯಾರೇ ಮಾಡಿದರು ಅದು ಅಕ್ಷಮ್ಯ ಅಪರಾಧ ಮತ್ತು ಸಂವಿಧಾನದ ಉಲ್ಲಂಘನೆಯಾಗಿದ್ದು ಅದನ್ನು ಸಮನ್ವಯ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ, ಶಾಲಾ ಹಂತದಲ್ಲಿ ಶಿಕ್ಷಕರು ಮತ್ತು ಎಸ್‍ಡಿಎಂಸಿ ಸಮಿತಿಗಳು, ‘ಶಾಲೆಗೆ ಬನ್ನಿ ಶನಿವಾರ, ಸ್ವಚ್ಛಗೊಳಿಸೋಣ ಸರಸರ’ ಎಂಬ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಲು ಇದು ಸಕಾಲವೆಂದು ವೇದಿಕೆ ಅಭಿಪ್ರಾಯಪಡುತ್ತದೆ. ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಾಗು ಎಸ್‍ಡಿಎಂಸಿ ಸದಸ್ಯರು ಯಾವುದೇ ತಾರತಮ್ಯವಿಲ್ಲದೆ ಸರದಿ ಅಥವಾ ಪಾಳಿ ಪದ್ಧತಿಯಲ್ಲಿ ಸ್ವಚ್ಚಗೊಳಿಸುವ ವ್ಯವಸ್ಥೆ ರೂಪಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ದೀರ್ಘ ಕಾಲದ ವ್ಯವಸ್ಥಿತ ಯೋಜನೆಯಾಗಿ ಸರಕಾರ ಮತ್ತು ಸ್ಥಳೀಯ ಸರಕಾರಗಳು, ಎಲ್ಲ ಸರಕಾರಿ ಶಾಲಾ-ಕಾಲೇಜುಗಳ ಶೌಚಾಲಯಗಳಲ್ಲಿ ಉತ್ತಮ ಗುಣಮಟ್ಟದ ಅತ್ಯಾಧುನಿಕ ಟಾಯ್ಲೆಟ್ ಫ್ಲಶ್ ವ್ಯವಸ್ಥೆಯ ವಿನ್ಯಾಸಗೊಳಿಸಲು ಕ್ರಮವಹಿಸಬೇಕು. ಈ ಬಗೆಯ ಫ್ಲಶ್ ವಿನ್ಯಾಸಗಳು ನೀರಿನ ಉಳಿತಾಯ ಹಾಗು ಶುಚಿತ್ವ ಮತ್ತು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ನಿರ್ವಹಣೆಯನ್ನು ಸುಲಭ ಮತ್ತು ಸರಳೀಕರಣಗೊಳಿಸುತ್ತದೆ ಎಂದು ಡಾ. ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

ತಕ್ಷಣದ ಪರಿಹಾರವಾಗಿ, ಸರಕಾರ ಮತ್ತು ಸ್ಥಳೀಯ ಸರಕಾರಗಳು ಎಲ್ಲ ಸರಕಾರಿ ಶಾಲಾ-ಕಾಲೇಜುಗಳ ಶೌಚಾಲಯಗಳಲ್ಲಿ ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲು ಕಾರ್ಯಕ್ರಮ ರೂಪಿಸಬೇಕು. ತಕ್ಷಣ ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಶೌಚಾಲಯಗಳ ಬಳಿ ನೀರಿನ ಶೇಖರಿಸುವ ಟ್ಯಾಂಕಗಳನ್ನು ನಿರ್ಮಿಸುವ ಮೂಲಕ ನೀರನ್ನು ತುಂಬಿಸಿಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಕಾರ್ಯಕ್ಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕಾವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.

ಮೇಲಿನ ಸ್ವಚ್ಛತಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಯಾಗಲು ಶೌಚಾಲಯ ಬ್ರಶ್, ಪೊರಕೆ, ಹ್ಯಾಂಡ್ ಗ್ಲೌಸ್, ಫಿನಾಯಿಲ್, ಹಾರ್ಪಿಕ್, ಆಸಿಡ್ ಇತ್ಯಾದಿಗಳನ್ನು ಸಾಕಷ್ಟು ಅಗತ್ಯ ಪ್ರಮಾಣದಲ್ಲಿ ಖರೀದಿಸಲು, ಸರಕಾರ ಶಾಲಾ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು. ಶನಿವಾರದ ಸ್ವಚ್ಚತಾ ದಿನದಂದು ಶಿಕ್ಷಕರು ಮತ್ತು ಮಕ್ಕಳಿಗೆ ಸಹಾಯ ಮಾಡುಲು ಅರ್ಧದಿನದ ಕೆಲಸವನ್ನು ಎಂಜಿಎನ್‍ಆರ್ ಇಜಿ ಅಡಿಯಲ್ಲಿ ಪರಿಗಣಿಸಿ ಎರಡು ಅಥವಾ ಮೂರು ಸಹಾಯಕ ಸಿಬ್ಭಂದಿಯನ್ನು ಒದಗಿಸಲು ಕ್ರಮವಹಿಸಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News