×
Ad

ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳ ಅನುಷ್ಠಾನ :ಸಚಿವ ಸಂತೋಷ್‌ ಲಾಡ್

Update: 2025-03-12 22:50 IST

PC: facebook.com/SantoshSLad

ಬೆಂಗಳೂರು : ಮಹಿಳಾ ಸಬಲೀಕರಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ತ್ರೀ ಶಕ್ತಿ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಮಹಿಳಾ ಸಹಾಯವಾಣಿ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚನ್ನಬಸಪ್ಪ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಉತ್ತರ ನೀಡಿದ ಅವರು, ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಧನಶ್ರೀ, ಮಾಜಿ ದೇವದಾಸಿ ಮಹಿಳೆ ಪುನರ್ವಸತಿ ಯೋಜನೆ, ಮಾಜಿ ದೇವದಾಸಿಯರಿಗೆ ವಸತಿ ನಿರ್ಮಾಣ ಯೋಜನೆ, ಬಡ್ಡಿ ಸಹಾಯಧನ ಯೋಜನೆ, ಮಹಿಳಾ ತರಬೇತಿ ಯೋಜನೆ, ವೃದ್ಧಿ ಯೋಜನೆ, ಕಿರುಸಾಲ ಯೋಜನೆ, ಮಹಿಳೆಯರಿಗೆ ಬಡ್ಡಿ ಸಹಾಯಧನ ಯೋಜನೆ, ಆ್ಯಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಸಾಲ ಸೌಲಭ್ಯಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಕ್ಕಳ ಹಕ್ಕು ರಕ್ಷಣೆ ಮಾಡುವಲ್ಲಿ ಪ್ರಸ್ತುತ ರಾಜ್ಯದಲ್ಲಿ 32 ಸರಕಾರಿ ಬಾಲಕರ ಬಾಲಮಂದಿರ, 30 ಸರಕಾರಿ ಬಾಲಕಿಯರ ಬಾಲಮಂದಿರ, 0-6 ವರ್ಷದೊಳಗಿನ ಮಕ್ಕಳಿಗೆ 1 ಶಿಶುಮಂದಿರ, 4 ಬುದ್ದಿಮಾಂದ್ಯ ಮಕ್ಕಳ ಬಾಲಮಂದಿರ ಹಾಗೂ ಬಾಲಕರಿಗಾಗಿ 16 ವೀಕ್ಷಣಾಲಯ ಮತ್ತು ಬಾಲಕಿಯರಿಗಾಗಿ 1 ವೀಕ್ಷಣಾಲಯ 21 ಸರಕಾರಿ ವಿಶೇಷ ದತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ಅಲ್ಲದೇ, 23 ಸರಕಾರೇತರ ವಿಶೇಷ ದತ್ತು ಸಂಸ್ಥೆಗಳು, 29 ತೆರೆದ ತಂಗುದಾಣಗಳು, 32 ನಿರ್ಗತಿಕ ಮಕ್ಕಳ ಕುಟೀರ, 5 ಅರ್ಹ ಸಂಸ್ಥೆ ಮತ್ತು 7 ಅನುಪಾಲನಾ ಗೃಹಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಂತೋಷ್ ಲಾಡ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News