×
Ad

‘ಟ್ಯಾಂಕರ್ ನೀರು ಮಾಫಿಯಾ’ ಕಡಿವಾಣಕ್ಕೆ ‘ಸಂಚಾರಿ ಕಾವೇರಿ ಯೋಜನೆ’ ಜಾರಿ : ಡಿ.ಕೆ.ಶಿವಕುಮಾರ್

Update: 2025-05-09 19:26 IST

ಬೆಂಗಳೂರು : ಬೆಂಗಳೂರು ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ವಿಧಾನಸೌಧದ ಆವರಣದಲ್ಲಿ ಬೆಂಗಳೂರು ಜಲಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸರ್ವರಿಗೂ ಸಂಚಾರಿ ಕಾವೇರಿ’, ‘ಮನೆ ಬಾಗಿಲಿಗೆ ಸರಳ ಕಾವೇರಿ’ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಜನರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಖಾಸಗಿಯವರು ಕೊಳವೆ ಬಾವಿ ಕೊರೆಸಿ, ಟ್ಯಾಂಕರ್‍ಗಳನ್ನು ಇಟ್ಟುಕೊಂಡು ಒಂದು ಟ್ಯಾಂಕರ್ ನೀರಿಗೆ 3 ಸಾವಿರ ರೂಪಾಯಿವರೆಗೂ ಹಣ ವಸೂಲಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಆದರೆ ಸಂಚಾರಿ ಕಾವೇರಿ ಯೋಜನೆ ಮೂಲಕ 4 ಸಾವಿರ ಲೀಟರ್ ನೀರಿಗೆ 660 ರೂ. ಹಾಗೂ 6 ಸಾವಿರ ಲೀಟರ್ ನೀರಿಗೆ 740 ರೂ. ದರ ನಿಗದಿ ಮಾಡಲಾಗಿದೆ. ಇದು ಕೊಳವೆ ಬಾವಿ ನೀರಲ್ಲ. ಇದು ಬಿಡಬ್ಲ್ಯೂಎಸ್‍ಎಸ್‍ಬಿ ವತಿಯಿಂದ ನೀಡುತ್ತಿರುವ ಶುದ್ಧ ಕುಡಿಯುವ ನೀರು ಎಂದು ತಿಳಿಸಿದರು.

ಇದು ಸಣ್ಣ ಯೋಜನೆಯಲ್ಲ, ಹಿಂದಿನ ವರ್ಷ ಬರಗಾಲದಲ್ಲಿ ನೀರಿನ ಅಭಾವ ಎದುರಾದಾಗ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಲಾಯಿತು. ಈ ಯೋಜನೆ ಅದರ ಮುಂದುವರೆದ ಭಾಗವಾಗಿದೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿ ಸಭೆ ಮಾಡಲಾಗಿದೆ. ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಸಣ್ಣ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಕೇವಲ ಒಂದು ಸಾವಿರ ರೂ. ಶುಲ್ಕ ಪಡೆಯಲು ತೀರ್ಮಾನಿಸಿದ್ದೇವೆ. ಅಪಾರ್ಟ್‍ಮೆಂಟ್‍ನವರಿಗೆ ಆರಂಭದಲ್ಲಿ ಶೇ.20ರಷ್ಟು ಹಣ ಪಡೆದು ನಂತರ ಒಂದು ವರ್ಷ ಕಾಲಾವಕಾಶ ನೀಡಲು ಮುಂದಾಗಿದ್ದೇವೆ. ಹೀಗೆ ಹೊಸ ನೀತಿಗಳ ಮೂಲಕ ಎಲ್ಲವನ್ನು ಒಂದು ವ್ಯವಸ್ಥೆಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನೆಲಮಂಗಲದಲ್ಲಿ 1,900 ಕೋಟಿ ರೂ. ವೆಚ್ಚದಲ್ಲಿ ವೃಷಭಾವತಿ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಪ್ರತಿ ನೀರಿನ ಹನಿಯು ಮಹತ್ವದ್ದಾಗಿದೆ. ಅನೇಕರು ಇದನ್ನು ಟೀಕೆ ಮಾಡಬಹುದು. ಆದರೆ ಇಂತಹ ಯೋಜನೆ ಇದೇ ಮೊದಲಲ್ಲ. ದಿಲ್ಲಿಯಲ್ಲೂ ಯಮುನಾ ನದಿ ನೀರನ್ನು ಗಿಡ ಬೆಳೆಸಲು, ವಾಹನ ತೊಳೆಯಲು ಹಾಗೂ ಕೈಗಾರಿಕೆಗೆ ಪೂರೈಸುತ್ತಾರೆ ಎಂದು ಅವರು ವಿವರಿಸಿದರು.

ಕಾವೇರಿ ನೀರಿನಲ್ಲಿ ಬಾಕಿ ಉಳಿದಿದ್ದ 6 ಟಿಎಂಸಿ ನೀರನ್ನು ಬಿಡಬ್ಲ್ಯೂಎಸ್‍ಎಸ್‍ಬಿ ಪೂರೈಕೆಗೆ ಆದೇಶ ಹೊರಡಿಸಿದೆ. ಮುಂದೆ ಕಾವೇರಿ ಆರನೇ ಹಂತ ಯೋಜನೆಗೆ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ದರ ಏರಿಕೆ ನಂತರ ಈಗ ವಿವಿಧ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು.

ಕೊಳಚೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತ್ಯೇಕವಾಗಿ ಸಭೆ ಮಾಡಿ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನೀರನ್ನು ಸಂಸ್ಕರಿಸಲು ಕೇಂದ್ರ ಸರಕಾರ ಹಾಗೂ ವಿಶ್ವ ಬ್ಯಾಂಕುಗಳ ನೆರವು ಪಡೆಯಲಾಗುವುದು. ಇನ್ನು ಕಸ ವಿಲೇವಾರಿ ವಿಚಾರವಾಗಿ ಕೆಲವರು ಮಾಫಿಯಾ ಮಾಡಿಕೊಂಡಿದ್ದರು. ನಾವು ತನಿಖೆ ಮಾಡಿಸಿದ್ದೇವೆ. ನ್ಯಾಯಾಲಯ ಈಗ ನಮಗೆ ಟೆಂಡರ್ ಕರೆಯಲು ಅವಕಾಶ ನೀಡಿದೆ. ನಗರದ ಅಭಿವೃದ್ಧಿಗೆ ಕಸ ವಿಲೇವಾರಿ, ಕೊಳಚೆ ನೀರು, ಕುಡಿಯುವ ನೀರು, ವಿದ್ಯುತ್, ಸಂಚಾರ ಕ್ಷೇತ್ರಗಳ ಬಗ್ಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದೇ ವೇಳೆ ಶಾಸಕರಾದ ರಿಝ್ವಾನ್ ಅರ್ಶದ್, ಎಸ್.ಟಿ.ಸೋಮಶೇಖರ್, ಎ.ಸಿ.ಶ್ರೀನಿವಾಸ್, ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.

‘ಬಿಡಬ್ಲ್ಯೂಎಸ್‍ಎಸ್‍ಬಿ ವತಿಯಿಂದ ಇತ್ತೀಚೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ. ಈಗ ಸರಕಾರ ಕೆಆರ್‌ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ನೀರಾವರಿ ಇಲಾಖೆಯಿಂದ ಸುಮಾರು 100ಕೋಟಿ ರೂ.ಮೀಸಲಿಡಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೂಕ್ತ ಜವಾಬ್ದಾರಿ ನೀಡಲಾಗುವುದು. ಹಾಗೆಯೇ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ದಸರಾ ವೇಳೆಗೆ  ಕಾವೇರಿ ಆರತಿ ಮಾಡಲು ಸಿದ್ಧತೆ ಮಾಡಲಾಗುತ್ತಿದೆ’

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ಖಾಸಗಿಯವರಿಗೆ ನೀಡಲಿಲ್ಲ: ‘ನೀರು, ವಿದ್ಯುತ್ ಸಂಸ್ಥೆಗಳು ಸರಕಾರದ ನಿಯಂತ್ರಣದಲ್ಲೇ ಇಟ್ಟುಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ. ದಿಲ್ಲಿ ಹಾಗೂ ಮುಂಬೈನಲ್ಲಿ ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ನೀಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಖಾಸಗಿಯವರಿಗೆ ನೀಡಲಿಲ್ಲ. ನನ್ನ ಬಳಿಗೂ ದೊಡ್ಡ ಕಂಪನಿಗಳು ಬಂದು ವಿದ್ಯುತ್ ಸರಬರಾಜನ್ನು ಹಸ್ತಾಂತರ ಮಾಡಿ ನಾವು ನಿರ್ವಹಿಸುತ್ತೇವೆ ಎಂದು ಕೇಳಿದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ’

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News