ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್.ರಮೇಶ್ ಪಟ್ಟಾಭಿನಗರ ವಾರ್ಡ್ ವ್ಯಾಪ್ತಿಯ ಜಯನಗರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ದಿಢೀರ್ ಭೇಟಿ ನೀಡಿ, ಆಹಾರದ ಗುಣಮಟ್ಟ, ಶುಚಿತ್ವ, ದಾಸ್ತಾನು ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿರುವ ಆಹಾರದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ಶನಿವಾರದ ನಿಗದಿತ ಮೆನುವಿನಂತೆ ಅನ್ನ, ಸಾಂಬಾರ್, ಪಲ್ಯ ಮತ್ತು ಖೀರು(ಪಾಯಸ)ವನ್ನು ಇಂದಿರಾ ಕ್ಯಾಂಟಿನ್‍ಗೆ ಪೂರೈಸಬೇಕಾಗಿದ್ದು, ಗುತ್ತಿಗೆ ಸಂಸ್ಥೆಯಿಂದ ಕೇವಲ ಬಿಸಿ ಬೇಳೆಬಾತ್ ಮಾತ್ರ ಪೂರೈಕೆಯಾಗಿದೆ. ಹಿಂದಿನ ನಾಲ್ಕೈದು ದಿನಗಳಿಂದಲೂ ಇದೇ ರೀತಿ ಮೆನು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಆಯುಕ್ತರು ಗುತ್ತಿಗೆ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಇಂದಿರಾ ಕ್ಯಾಂಟೀನ್‍ಗೆ ‘ರಿವಾಡ್ರ್ಸ್’ ಸಂಸ್ಥೆಯಿಂದ ಆಹಾರ ಸರಬರಾಜು ಮಾಡಲಾಗುತ್ತಿದ್ದು, ಈ ಸಂಸ್ಥೆಯು ನಿಗದಿತ ಮೆನು ಪ್ರಕಾರದಲ್ಲಿ ಆಹಾರ ಪೂರೈಸದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ನಿಯಮ ಉಲ್ಲಂಘಿಸಿರುವ ಸಂಸ್ಥೆಗೆ ತಕ್ಷಣ ನೋಟಿಸ್ ಜಾರಿಗೊಳಿಸಿ ಗರಿಷ್ಠ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾ ಕ್ಯಾಂಟೀನ್‍ಗೆ ಊಟಕ್ಕೆ ಬರುವ ಸಾರ್ವಜನಿಕರು ಆಹಾರದ ಗುಣಮಟ್ಟ ಮತ್ತು ಶುಚಿತ್ವದ ಕೊರತೆ ಕುರಿತು ದೂರುಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದನ್ನು ಪರಿಶೀಲಿಸಿದ ಆಯುಕ್ತರು, ಆಹಾರದ ಗುಣಮಟ್ಟ ಕುರಿತು ದೂರುಗಳಿದ್ದರೂ ಮೇಲಧಿಕಾರಿಗಳಿಗೆ ಲಿಖಿತವಾಗಿ ವರದಿ ನೀಡಿ ಕ್ರಮ ಕೈಗೊಳ್ಳದೆ, ಕೇವಲ ಮೊಬೈಲ್ ಸಂದೇಶ ಕಳುಹಿಸಿದ್ದ ಕ್ಯಾಂಟೀನ್ ಮೇಲ್ವಿಚಾರಕರ ಬೇಜವಾಬ್ದಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ, ಸಾರ್ವಜನಿಕರ ದೂರುಗಳ ಸಂಬಂಧ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ, ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಮುಂದುವರೆದು, ಬಡವರು ಹಾಗೂ ಆಸ್ಪತ್ರೆಯ ರೋಗಿಗಳ ಅನುಕೂಲಕ್ಕಾಗಿ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ನೀಡುವ ಸರಕಾರದ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ತಾಕೀತು ನೀಡಿದರು.

ಕ್ಯಾಂಟೀನ್ ಆವರಣದಲ್ಲಿ ಒಳಚರಂಡಿ ನೀರು ಉಕ್ಕಿ ಹರಿಯುತ್ತಿರುವುದನ್ನು ಗಮನಿಸಿದ ಆಯುಕ್ತರು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಬಂಧಪಟ್ಟ ಎಂಜಿನಿಯರ್ ಗೆ ಕರೆ ಮಾಡಿ ಕೂಡಲೇ ಚರಂಡಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಕ್ಯಾಂಟೀನ್ ಮೇಲ್ವಿಚಾರಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor