ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ, ವಿಭಜನೆ ಮಾಡುವುದಲ್ಲ : ಸಿಎಂ ಡಿ.ಕೆ.ಶಿವಕುಮಾರ್
"ಗುರುಗಳು, ಮಠಗಳ ಕಾರ್ಯ ಸ್ತುತ್ಯಾರ್ಹ"
ಡಿ.ಕೆ.ಶಿವಕುಮಾರ್
ಬೆಂಗಳೂರು: ಸರ್ಕಾರ ಏನೇ ಮಾಡಬಹುದು. ಆದರೆ ಗುರುಗಳು ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ. ಗುರುಗಳಿಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ. ಅಕ್ಷರ, ಅನ್ನ ಹಾಗೂ ಧರ್ಮದಾಸೋಹದ ಮೂಲಕ ಮಠಾಧೀಶರು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗವನ್ನು ಉದ್ದೇಶಿಸಿ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದರು.
ಈ ಹಿಂದೆ ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನು ಬೇರ್ಪಡಿಸುವ ಪ್ರಯತ್ನ ನಡೆದಾಗ ಸಮುದಾಯದ ಗುರುಗಳಲ್ಲಿ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ; ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ. ನಮ್ಮದು ಸಮಾಜವನ್ನು ಒಗ್ಗೂಡಿಸುವ ಧರ್ಮವೇ ಹೊರತು ವಿಭಜಿಸುವುದಲ್ಲ. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಹೇಳಿದರು.
ಬಾಳೆಹೊನ್ನೂರು ಮಠ ಸೇರಿದಂತೆ ಅನೇಕ ಮಠಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಆಚಾರ-ವಿಚಾರಗಳನ್ನು ಗಮನಿಸಿದ್ದೇನೆ. ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಇದನ್ನು ಕಂಡು ದೇಶದ ಅನೇಕ ನಾಯಕರು ಅಚ್ಚರಿಪಟ್ಟಿದ್ದರು ಎಂದರು.
ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆಗ ಧರ್ಮ, ಜಾತಿಗಿಂತ ಮಾನವೀಯತೆ ಮುಖ್ಯ, ಎಲ್ಲರೂ ಒಂದೇ ಎಂದು ಹೇಳಿದ್ದೆ. ಈ ಮಾತಿಗೆ ಅನೇಕರು ಟೀಕೆ ಮಾಡಿದ್ದರು. ಆದರೆ, ನಾನು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ತಿಳಿಸಿದರು.
ಈ ಬಾರಿಯ ದಸರಾ ಉದ್ಘಾಟನೆಯನ್ನು ಕೊಪ್ಪಳದ ಗವಿಮಠದ ಶ್ರೀಗಳು ನೆರವೇರಿಸಲಿದ್ದಾರೆ. ಆ ಮಠದ ಕಾರ್ಯಗಳನ್ನು ಗಮನಿಸಿದ್ದೇನೆ. ಶ್ರೀಗಳ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯ ಒಪ್ಪಿಕೊಂಡಿದೆ. ದಸರಾ ಉದ್ಘಾಟನೆಗೆ ಶ್ರೀಗಳೂ ಒಪ್ಪಿಗೆ ಸೂಚಿಸಿದ್ದರು. ಅವರೊಂದಿಗೆ ಮಾತನಾಡಿಯೇ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಕೆಲವರು ಇದರಲ್ಲೂ ರಾಜಕೀಯ ಮಾಡಲು ಪ್ರಯತ್ನಿಸಿದರು. ಶ್ರೀಗಳು ಒಪ್ಪಿಲ್ಲ ಎಂದು ಸುಳ್ಳು ಸುದ್ದಿ ಹರಡಿದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನನಗೆ ಸಿಕ್ಕಿರುವ ಅವಕಾಶದಲ್ಲಿ ಜನರ ಹೃದಯ ಗೆದ್ದು ಕೆಲಸ ಮಾಡುತ್ತೇನೆ. ಅದೇ ನನ್ನ ಗುರಿ. ಗುರುಗಳೆಲ್ಲರೂ ನೀಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರ್ಕಾರಕ್ಕೆ ಸಂದಿದೆ. ಇದಕ್ಕಾಗಿ ಧನ್ಯವಾದಗಳು. ನಿಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.