ಇಂದಿರಾ ಗಾಂಧಿ ನನ್ನ ರಾಜಕೀಯ ಬದುಕಿಗೆ ಧೈರ್ಯ ತುಂಬಿದವರು: ವೀರಪ್ಪ ಮೊಯ್ಲಿ
ಬೆಂಗಳೂರು : ರಕ್ತ ಮತ್ತು ದೇಹವನ್ನು ತಂದೆ-ತಾಯಿ ನೀಡಿರಬಹುದು. ಆದರೆ ರಾಜಕೀಯ ಬದುಕಿನಲ್ಲಿ ಧೈರ್ಯ, ಆತ್ಮವಿಶ್ವಾಸ ಹಾಗೂ ಸೈದ್ಧಾಂತಿಕ ನಂಬಿಕೆಯನ್ನು ತುಂಬಿ ಉನ್ನತ ಸ್ಥಾನಕ್ಕೇರಲು ಪ್ರೇರಣೆ ನೀಡಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸ್ಮರಿಸಿದ್ದಾರೆ.
ಶನಿವಾರ ನಗರದ ಪುರಭವನದಲ್ಲಿ ಇಂದಿರಾಗಾಂಧಿ ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಇಂದಿರಮ್ಮನ ಸ್ಮರಣೆ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ದೊರೆತಿದ್ದು, ಅದಕ್ಕೆ ಇಂದಿರಾ ಗಾಂಧಿಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿತ್ತು ಎಂದರು.
ಕೈಮಗ್ಗ ನೇಕಾರರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ನೇಕಾರರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು. ಕರ್ನಾಟಕ ಹ್ಯಾಂಡ್ಲೂಮ್ ಕಾರ್ಪೊರೇಷನ್ ಗೆ ಐದು ಕೋಟಿ ರೂ. ಅನುದಾನ ಮಂಜೂರು ಮಾಡಿಸುವ ಮೂಲಕ ನೇಕಾರರ ಅಭಿವೃದ್ಧಿಗೆ ನೆರವಾಗಿದ್ದರು. ಕೇರಳದ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿಯೂ ಇಂದಿರಾ ಗಾಂಧಿ ತಮಗೆ ಬೆಂಬಲವಾಗಿ ನಿಂತಿದ್ದರು. ರಾಜಕೀಯವಾಗಿ ಮಹತ್ವದ ಹಾಗೂ ಸವಾಲಿನ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಧೈರ್ಯ ಮತ್ತು ಪ್ರೋತ್ಸಾಹ ಅಪಾರವಾಗಿತ್ತು ಎಂದು ವೀರಪ್ಪ ಮೊಯ್ಲಿ ಹೇಳಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಮಹಿಳೆಯೊಬ್ಬರು ರಾಜಕೀಯದಲ್ಲಿ ಎಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ತಮ್ಮ ಸಾಧನೆ ಮತ್ತು ನಾಯಕತ್ವದ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು ಇಂದಿರಾ ಗಾಂಧಿ. ಅವರ ಆಡಳಿತದ ನಿರ್ಧಾರಗಳು, ಜನಪರ ಯೋಜನೆಗಳು ಹಾಗೂ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ಸ್ಮರಣೀಯ. ಇಂದಿರಾ ಅವರ ವ್ಯಕ್ತಿತ್ವ, ವಿಚಾರಧಾರೆ ಮತ್ತು ಸಾಧನೆಗಳನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ವೇದಿಕೆ ಕೈಗೊಂಡಿರುವ ಪ್ರಯತ್ನ ಸ್ವಾಗತಾರ್ಹ ಎಂದು ತಿಳಿಸಿದರು.
ಇಂದಿರಾ ಗಾಂಧಿ ನೆನಪನ್ನು ಮುಂದಿನ ಪೀಳಿಗೆಗೂ ಜೀವಂತವಾಗಿಡುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಅವರ ಬಗ್ಗೆ ಮಾತನಾಡುವುದೆಂದರೆ, ಸೂರ್ಯನ ಕಿರಣಗಳನ್ನು ಪರಿಚಯಿಸಿದಂತೆ. ಅಧಿಕಾರ ಎಂದರೇನು, ನಾಯಕತ್ವ ಎಂದರೇನು ಎಂಬುದನ್ನು ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಗೆ ತಮ್ಮ ಕಾರ್ಯವೈಖರಿಯ ಮೂಲಕ ತೋರಿಸಿಕೊಟ್ಟ ಮಹಾನ್ ಮಹಿಳಾ ಶಕ್ತಿ. ತಂದೆ ಜವಾಹರಲಾಲ್ ನೆಹರು ಅವರ ರಾಜಕೀಯ ವ್ಯಕ್ತಿತ್ವವನ್ನೂ ಮೀರಿ ಬೆಳೆದು, ದೇಶದ ಪ್ರಬಲ ನಾಯಕಿಯಾಗಿ ಹೊರಹೊಮ್ಮಿದ ಇಂದಿರಾ ಗಾಂಧಿ, ಮಹಿಳಾ ನಾಯಕತ್ವಕ್ಕೆ ಹೊಸ ಆಯಾಮ ನೀಡಿದರು ಎಂದು ರಾಣಿ ಸತೀಶ್ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಷನ್ ಬೇಗ್, ಕಾಂಗ್ರೆಸ್ ಮುಖಂಡರಾದ ಕೆ.ಎಂ.ನಾಗರಾಜ್, ಪಾಷಾ, ಹುಚ್ಚಪ್ಪ, ಎಸ್.ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.