ಕಲಾವಿದ ದತ್ತಣ್ಣಗೆ ‘ಕನ್ನಡ ಭಾರತೀ ರಂಗ ಪ್ರಶಸ್ತಿ’
ಬೆಂಗಳೂರು : ಹೊಸದಿಲ್ಲಿಯ ಕರ್ನಾಟಕ ಸಂಘವು ಪ್ರತಿ ವರ್ಷ ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ‘ಕನ್ನಡ ಭಾರತೀ ರಂಗ ಪ್ರಶಸ್ತಿ’ಯನ್ನು 2026ನೇ ಸಾಲಿಗೆ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಅವರಿಗೆ ನೀಡಲು ಸಂಘದ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದೆ.
ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದೆ. ಪ್ರಸ್ತುತ 2026ನೇ ಸಾಲಿನ ಈ ಪ್ರಶಸ್ತಿಯನ್ನು ರಂಗ ಕಲಾವಿದ, ಚಿತ್ರ ನಟ ಶ್ರೀ ದತ್ತಣ್ಣ ಅವರಿಗೆ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆ ಮತ್ತು ದಿಲ್ಲಿಗೆ ಬಂದು-ಹೋಗುವ ವಿಮಾನಯಾನ ವೆಚ್ಚವನ್ನು ಒಳಗೊಂಡಿರುತ್ತದೆ.
2015ರಲ್ಲಿ ಮೊದಲ ಪ್ರಶಸ್ತಿಯನ್ನು ‘ಕನ್ನಡ ಭಾರತಿ’ಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ರಂಗಕರ್ಮಿ ಎಂ.ವಿ.ನಾರಾಯಣರಾವ್, 2016ರಲ್ಲಿ ಸರೋಜಿನಿ ಶೆಟ್ಟಿ, 2017ರಲ್ಲಿ ಸುರೇಶ್ ಆನಗಳ್ಳಿ, 2021ರಲ್ಲಿ ಡಾ.ಪಂಡಿತಾರಾಧ್ಯ ಸ್ವಾಮೀಜಿ, 2022ರಲ್ಲಿ ಶ್ರೀನಿವಾಸ ಜಿ.ಕಪ್ಪಣ್ಣ, 2023ರಲ್ಲಿ ಎಸ್.ದೊಡ್ಡಣ್ಣ, 2024ರಲ್ಲಿ ಡಾ.ಟಿ.ಎಸ್.ನಾಗಾಭರಣ, 2025ರಲ್ಲಿ ಚರಣ್ ರಾಜ್ ಅವರಿಗೆ ನೀಡಿ ಗೌರವಿಸಲಾಗಿರುತ್ತದೆ.
ನವೆಂಬರ್ ತಿಂಗಳ ಸಂಘದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ‘ದತ್ತಣ್ಣ ಅವರೊಂದಿಗೆ ಸಂವಾದ ಹಾಗೂ ಮನದ ಕಡಲು’ ಜನಪ್ರಿಯ ಕನ್ನಡ ಚಲನಚಿತ್ರ ಪ್ರದರ್ಶನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರೇಣುಕುಮಾರ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.