ಕೆಪಿಎಸ್‍ಸಿಯಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ
ಬೆಂಗಳೂರು : ಕೆಪಿಎಸ್‍ಸಿ ನಡೆಸಿದ ಕೆಎಎಸ್ ಪ್ರೊಬೆಷನರಿ ಹುದ್ದೆಗಳಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯಿತು.
ಧರಣಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಭ್ರಷ್ಟ ಲೋಕಸೇವಾ ಆಯೋಗದ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್‍ಗಳನ್ನು ಸರಕಾರ ಮೊದಲು ಸರಿ ಮಾಡಬೇಕು. ಇಲ್ಲದಿದ್ದಲ್ಲಿ ನಾವೆಲ್ಲರೂ ಸೇರಿ ಯಾರ ನಟ್ಟು, ಬೋಲ್ಟ್ ಸರಿ ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಲೋಪ ದೋಷದ ಆಯೋಗ, ಲೂಟಿಕೋರರ ಆಯೋಗ, ಅಯೋಗ್ಯರ ಆಯೋಗವಾಗಿ ಮಾರ್ಪಟ್ಟಿರುವ ಲೋಕಸೇವಾ ಆಯೋಗವನ್ನು ಕೂಡಲೇ ರದ್ದು ಮಾಡಬೇಕು. ನೂತನ ಆಯೋಗವನ್ನು ರಚಿಸಬೇಕು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಕನ್ನಡಕ್ಕೆ ಆದ್ಯತೆ ನೀಡದೆ ಭಾಷಾಂತರ ಮಾಡಿ, ಕೃಪಾಂಕ ನೀಡುವ ಮೂಲಕ ಜಾರಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಪರೀಕ್ಷೆ ಬರೆಸಿದರು ಅವರು ಸಹ ನಾಲ್ಕೈದು ಬಾರಿ ಫೇಲ್ ಆಗುತ್ತಾರೆ. ಇಂತಹ ಅಯೋಗ್ಯರಿಂದಲೆ ಮತ್ತೆ ತಪ್ಪನ್ನು ಸರಿಪಡಿಸುವ ಮುಖ್ಯಮಂತ್ರಿಗಳ ಮಾತು ನಿಜಕ್ಕೂ ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹಿರಿಯ ಸಾಹಿತಿ ನಾಡೋಜ ಪ್ರೊ. ಹಂಪನಾಗರಾಜಯ್ಯ, ಕರವೇ ರಾಜ್ಯ ಪ್ರದಾನ ಕಾರ್ಯದರ್ಶಿ ಸಣ್ಣೀರಪ್ಪ ಮತ್ತಿತರರು ಹಾಜರಿದ್ದರು.