ಪ್ರಯಾಣಿಕರ ಸುರಕ್ಷತೆಗೆ ಒತ್ತು : ಬೆಂಗಳೂರಿನ ಎಲ್ಲ ಕ್ಯಾಬ್‍ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್ ಅಂಟಿಸಲು ಸೂಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಇನ್ಮುಂದೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್‍ಗಳಲ್ಲಿ 112 ತುರ್ತು ಸಹಾಯವಾಣಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್(ಕೆಎಸ್‍ಪಿ) ಮೊಬೈಲ್ ಅಪ್ಲಿಕೇಷನ್ ಬಗ್ಗೆ ಮಾಹಿತಿಯನ್ನು ಹೊಂದಿರುವ ಸ್ಟಿಕ್ಕರ್‌ಗಳನ್ನು ಅಂಟಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಇಲಾಖೆ, ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಈ ಹೊಸ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ. ಮಹಿಳಾ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಸಹಾಯವಾಣಿ ವಿವರಗಳು ಅಪರಾಧವನ್ನು ತಡೆಯಲು ಮತ್ತು ಸಂಚಾರ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ತಿಳಿಸಿದೆ.
ಕ್ಯಾಬ್ ನಿರ್ವಾಹಕರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿತವಾದ ಸ್ಟಿಕ್ಕರ್‌ಗಳನ್ನು ತಮ್ಮ ವಾಹನಗಳ ಎರಡು ಬದಿಗಳಲ್ಲಿ ಅಂಟಿಸಬೇಕು. ಹೊಸ ಆದೇಶದಲ್ಲಿ 12 ಸಾವಿರಕ್ಕೂ ಹೆಚ್ಚು ಕ್ಯಾಬ್‍ಗಳನ್ನು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಉಳಿದ ಎಲ್ಲ ವಾಹನಗಳು ಅನುಮೋದಿತ ಸ್ಟಿಕ್ಕರ್ ಗಳನ್ನು ಅಳವಡಿಸಲು ನಿರ್ದಿಷ್ಟ ಗಡುವನ್ನು ಸಹ ನಿಗದಿಪಡಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಪೊಲೀಸರು ನೀಡಿದ ಟೆಂಪ್ಲೇಟ್ 112 ಸಹಾಯವಾಣಿ ಸಂಖ್ಯೆಯೊಂದಿಗೆ ಬಳಕೆದಾರರನ್ನು ನೇರವಾಗಿ ಕರ್ನಾಟಕ ರಾಜ್ಯ ಪೊಲೀಸ್ ಮೊಬೈಲ್ ಅಪ್ಲಿಕೇಶನ್‍ಗೆ ಸಂಪರ್ಕಿಸುವ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರುತ್ತದೆ. ಇದರಿಂದ ಒಂಟಿಯಾಗಿ ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ. ಈ ತುರ್ತು ಸಹಾಯವಾಣಿಯು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತದೆ ಎಂದು ಇಲಾಖೆ ವಿವರಿಸಿದೆ.
112 ಸಂಖ್ಯೆಗೆ ಕರೆ ಮಾಡಿದರೆ 15 ನಿಮಿಷಗಳಲ್ಲಿ ಪೊಲೀಸರು ನೀವು ಕೊಟ್ಟ ವಿಳಾಸಕ್ಕೆ ಹಾಜರಾಗಿ ಸಮಸ್ಯೆಗೆ ಪರಿಹಾರವನ್ನು ಕೊಡುವ ಕೆಲಸವನ್ನು ಮಾಡುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯಾ ನಿಧಿ ಯೋಜನೆಯಡಿ ಏಕ ಸಂಖ್ಯೆಯ ಬಳಕೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರು ರಾತ್ರಿ ವೇಳೆ ಒಬ್ಬರೇ ಓಡಾಟವನ್ನು ನಡೆಸಿದಾಗ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ ಅವರ ಸಹಾಯಕ್ಕೆ ಧಾವಿಸಲು ಈ ಸಂಖ್ಯೆಯನ್ನು ಪರಿಚಯಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
112ಗೆ ಕರೆ ಮಾಡಿದಾಗ ಮೊದಲು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಪೊಲೀಸ್ ಠಾಣೆ ಯಾವ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಖಾತರಿ ಮಾಡಬೇಕು. ನಂತರ ಎಲ್ಲಿಂದ ಮಾತನಾಡುತ್ತಿದ್ದೇವೆ ಏನು ಸಮಸ್ಯೆ ಆಗಿದೆ, ಫೋನ್ ನಂಬರ್ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.