ಇನ್ವೆಸ್ಟ್ ಕರ್ನಾಟಕ-2025 | ಸಣ್ಣ ನಗರಗಳಲ್ಲಿ ಸ್ಟಾರ್ಟ್‌ಅಪ್ ವಿಸ್ತರಣೆಗೆ ಹಲವು ಕ್ರಮ: ಎಲ್.ಕೆ.ಅತೀಕ್
ಎಲ್.ಕೆ.ಅತೀಕ್
ಬೆಂಗಳೂರು : ಸಣ್ಣ ಪಟ್ಟಣಗಳು ಹಾಗೂ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮ ಕಾರ್ಯ ಪರಿಸರ ಅಭಿವೃದ್ಧಿಪಡಿಸಲು ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳಿದರು.
ಬುಧವಾರ ನಗರದ ಅರಮನೆ ಮೈದಾನದ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ‘ನಗರದ ಆಚೆಗೆ' (ಬಿಯಾಂಡ್ ಅರ್ಬನ್) ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ನಗರಗಳಲ್ಲಿ ಕೈಗಾರಿಕೆ ಆಧಾರಿತ ಕೌಶಲ್ಯಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವು ನಗರಗಳಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡಾಟಾ ಸೈನ್ಸ್ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಪರಿಪೋಷಕ (ಇನ್ ಕ್ಯುಬೇಷನ್) ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅತೀಕ್ ತಿಳಿಸಿದರು.
'ನೆಕ್ಸ್ಟ್ ವೆಲ್ತ್' ಸಂಸ್ಥೆ ಸಿಇಒ ಮೈಥಿಲಿ ರಮೇಶ್ ಮಾತನಾಡಿ, ಸಣ್ಣ ನಗರಗಳಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮ ಮಾಡಲಾಗದು ಎಂಬ ಬಗ್ಗೆ ಹಲವು ತಪ್ಪುಕಲ್ಪನೆಗಳಿವೆ. ಸಣ್ಣ ನಗರಗಳು ಅಂತರ್ ರಾಷ್ಟ್ರೀಯ ಗುಣಮಟ್ಟದ ಸಂಸ್ಥೆಗಳಿಗೆ ಸೂಕ್ತವಲ್ಲ, ಸಣ್ಣ ನಗರಗಳಲ್ಲಿ ಹೆಚ್ಚು ಅರ್ಹತೆಯ ವೃತ್ತಿಪರರು ಕೆಲಸ ಮಾಡುವುದಿಲ್ಲ, ಅಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿರುವುದಿಲ್ಲ ಎಂಬುದೆಲ್ಲಾ ವಾಸ್ತವಕ್ಕೆ ದೂರ ಎಂದರು.
ತಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಲ್ಲಿ ಚಿತ್ತೂರು, ವೆಲ್ಲೂರು, ಮಲ್ಲಸಮುದ್ರ ಮುಂತಾದ ಸಣ್ಣ ನಗರಗಳಲ್ಲಿ ಎಐ ಆಧಾರಿತ ಹೈಎಂಡ್ ತಂತ್ರಜ್ಞಾನದ ಕೆಲಸಗಳನ್ನು ಮಾಡುತ್ತಿದೆ. ಅತ್ಯುನ್ನತ ಅರ್ಹತೆಯ ತಂತ್ರಜ್ಞರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ವಿದ್ಯುತ್ ಪೂರೈಕೆ ಅಥವಾ ಅಂತರ್ಜಾಲದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಅವರು ವಿವರಿಸಿದರು.
ಸಣ್ಣ ನಗರಗಳಲ್ಲಿ ನವೋದ್ಯಮ ಆರಂಭಿಸುವುದರಿಂದ ಸ್ಥಳೀಯರ ಜೀವನಶೈಲಿ ಬದಲಾಗಲಿದ್ದು, ಆದಾಯ ಹೆಚ್ಚಲಿದೆ. ಇದರಿಂದ ಆರ್ಥಿಕತೆಯಲ್ಲಿ ಸರಣಿ ಬದಲಾವಣೆಯಾಗಲಿದೆ ಎಂದು ಮೈಥಿಲಿ ರಮೇಶ್ ಪ್ರತಿಪಾದಿಸಿದರು.
‘ಕಿರಾನಾ ಪ್ರೊ’ ಸಂಸ್ಥೆಯ ಸಿಇಒ ದೀಪಕ್ ರವೀಂದ್ರನ್ ಮಾತನಾಡಿ, ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಇರುವ ಸೌಲಭ್ಯಗಳು ಹಾಗೂ ಉದ್ಯೋಗಾವಕಾಶಗಳು ಸಣ್ಣ ನಗರಗಳಲ್ಲಿ ಇರುವುದಿಲ್ಲ. ಹೀಗಾಗಿ ಉದ್ಯಮಿಗಳು ಸಣ್ಣ ನಗರಗಳತ್ತ ವಲಸೆಯಾಗಲು ಹಿಂದೆ-ಮುಂದೆ ನೋಡುತ್ತಾರೆ. ಸಮರ್ಪಕ ಸೌಲಭ್ಯ ಸೃಷ್ಟಿಯಾದಲ್ಲಿ ಬೃಹತ್ ನಗರಗಳಾಚೆಗೂ ಉದ್ಯಮ ವಿಸ್ತರಣೆಯಾಗಲಿದೆ ಎಂದರು. 'ಇಂಕ್ ಟಾಕ್ಸ್' ಸಂಸ್ಥೆ ಸಿಇಒ ಲಕ್ಷ್ಮಿ ಪ್ರತೂರಿ ಗೋಷ್ಠಿ ನಿರ್ವಹಿಸಿದರು.