×
Ad

ಆನೆ ಸಂಚಾರ : ಡಿಸಿ, ಎಸ್ಪಿ, ಪಂಚಾಯ್ತಿಗೆ ರಿಯಲ್ ಟೈಮ್ ಮಾಹಿತಿ ನೀಡಲು ಈಶ್ವರ್ ಖಂಡ್ರೆ ಸೂಚನೆ

Update: 2025-02-14 23:11 IST

ಬೆಂಗಳೂರು : ಕಾಡಿನಂಚಿನ ಗ್ರಾಮಗಳಿಗೆ ನುಗ್ಗಿ ಜೀವಹಾನಿ, ಬೆಳೆ ಹಾನಿ ಮಾಡುವ ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು, ಸಕಾಲಿಕ (ರಿಯಲ್ ಟೈಮ್) ಮಾಹಿತಿಯನ್ನು ಸ್ಥಳಿಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಂಚಾಯ್ತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಪಿಡಿಒ ಮತ್ತು ಗ್ರಾಮದ ಮುಖ್ಯಸ್ಥರಿಗೆ ನೀಡುವ ಮೂಲಕ ಜೀವಹಾನಿ ತಡೆಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಿನ್ನೆ(ಫೆ.13) ಒಂದೇ ದಿನ ಆನೆ ದಾಳಿಯಿಂದ ಮೂರು ಅಮೂಲ್ಯ ಜೀವಗಳ ಹಾನಿ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅರಣ್ಯ ಭವನದಲ್ಲಿ ಎಲ್ಲ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ತುರ್ತು ವರ್ಚುವಲ್ ಸಭೆ ನಡೆಸಿದ ಅವರು, ಆನೆ ಹಾವಳಿ ನಿಯಂತ್ರಿಸಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಕಾಲರ್ ಕೂಡ ಲಭ್ಯವಿದ್ದು, ಗುಂಪಿನಲ್ಲಿರುವ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಥರ್ಮಲ್ ಕ್ಯಾಮರಾ ಬಳಸಿ ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟು, ಮಾಹಿತಿಯನ್ನು ಬಲ್ಕ್ ಎಸ್.ಎಂ.ಎಸ್. ಮೂಲಕ ಸಕಾಲಿಕವಾಗಿ ನೀಡುವ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು.

2022-23ರ ಸಾಲಿನಲ್ಲಿ ರಾಜ್ಯದಲ್ಲಿ ಆನೆಯಿಂದ 32 ಜನರು ಸಾವಿಗೀಡಾಗಿದ್ದರೆ, 2023-24ರಲ್ಲಿ 48 ಸಾವು ಸಂಭವಿಸಿದೆ, ಈ ವರ್ಷ ಇಲ್ಲಿಯವರೆಗೆ 30 ಜೀವಹಾನಿ ಆಗಿದೆ. ಫೆಬ್ರವರಿ, ಮಾರ್ಚ್, ಎಪ್ರಿಲ್ ಹಾಗೂ ಜುಲೈನಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಸಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಆವಾಸಸ್ಥಾನ ಅಭಿವೃದ್ಧಿಗೆ ಸೂಚನೆ: ಆನೆಗಳು ನೀರು ಮತ್ತು ಆಹಾರ ಅರಸಿ ಊರಿಗೆ ಬರುತ್ತಿದ್ದು, ಕಾಡಿನಲ್ಲೇ ಆನೆಗಳಿಗೆ ಆಹಾರ ಲಭಿಸುವಂತೆ ಮಾಡಲು ಮತ್ತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿಯ ನಡುವೆ ಡಿಜಿಟಲ್ ಸಂಪರ್ಕ ವೃದ್ಧಿಸಲು ಸೂಚಿಸಿದ ಅವರು, ಆನೆಗಳು ಊರಿನ ಬಳಿ ಕಾಣಿಸಿಕೊಂಡಾಗ ತ್ವರಿತವಾಗಿ ಸ್ಪಂದಿಸುವಂತೆ ತಿಳಿಸಿದರು.

ವಿರಾಜಪೇಟೆಯ ಪುಂಡಾನೆ ಸೆರೆಗೆ ತಂಡ ಕಳಿಸಲು ಸೂಚನೆ: ವಿರಾಜ ಪೇಟೆಯಲ್ಲಿ ಪುಂಡಾನೆ ಪದೇ ಪದೇ ಜನರ ಮೇಲೆ ದಾಳಿ ಮಾಡುತ್ತಿದ್ದು, ಇಂತಹ ಆನೆಗಳಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಸೂಚನೆ ನೀಡಿದರು.

ಆನೆಗಳ ಉಪಟಳ ಹೆಚ್ಚಿರುವ ಪ್ರದೇಶಗಳಲ್ಲಿ ತ್ವರಿತವಾಗಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಟೆಂಟಕಲ್ ಫೆನ್ಸಿಂಗ್, ಆನೆ ಕಂದಕ ಮತ್ತು ಸೌರಬೇಲಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳುವಂತೆ ಅವರು ತಿಳಿಸಿದರು.

ಕರ್ನಾಟಕದಲ್ಲಿ ಆನೆಯಿಂದಾಗುವ ಸಾವು ಕಡಿಮೆ: ಆನೆಗಳ ಸಂಖ್ಯೆ ಮತ್ತು ಆನೆಗಳಿಂದ ಸಂಭವಿಸುವ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಒಡಿಶಾ, ಪಶ್ವಿಮ ಬಂಗಾಳ, ಜಾಖರ್ಂಡ್, ಛತ್ತೀಸ್ ಗಢ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

2019-23ರ ನಡುವಿನ 5 ವರ್ಷಗಳ ಅವಧಿಯಲ್ಲಿ 6395 ಆನೆಗಳಿರುವ ಕರ್ನಾಟಕದಲ್ಲಿ 160 ಸಾವು ಸಂಭವಿಸಿದೆ. ಆದರೆ ಛತ್ತೀಸಗಢದಲ್ಲಿ ಇರುವುದೇ 247 ಆನೆ ಆದರೆ, ಅಲ್ಲಿ ಆನೆಗಳಿಂದ ಇದೇ 5 ವರ್ಷದ ಅವಧಿಯಲ್ಲಿ 313 ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಒಡಿಶಾದಲ್ಲಿ 1976 ಆನೆಗಳಿದ್ದು ಅಲ್ಲಿ 2019-23ರ ಅವಧಿಯಲ್ಲಿ 624 ಜನರು ಮೃತಪಟ್ಟಿದ್ದರೆ, 700 ಆನೆ ಇರುವ ಪಶ್ಚಿಮ ಬಂಗಾಳದಲ್ಲಿ 436 ಸಾವು ಸಂಭವಿಸಿದೆ. 2761 ಆನೆಗಳಿರುವ ತಮಿಳುನಾಡಿನಲ್ಲಿ ಇದೆ ಅವಧಿಯಲ್ಲಿ 256 ಮಂದಿ ಸಾವಿಗೀಡಾಗಿದ್ದರೆ, 1793 ಆನೆಗಳಿರುವ ಕೇರಳದಲ್ಲಿ 124 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಕಡೆ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಾಶ್ವತಿ ಮಿಶ್ರ, ಮನೋಜ್ ರಾಜನ್, ಪಿ.ಸಿ.ರೇ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News