×
Ad

ಕಚ್ಚಾಬಾಂಬ್‌ನಿಂದ ವನ್ಯಜೀವಿಗಳಿಗೆ ಹಾನಿ ಆಗದಂತೆ ಕ್ರಮಕ್ಕೆ ಈಶ್ವರ್‌ ಖಂಡ್ರೆ ಸೂಚನೆ

Update: 2025-04-24 20:07 IST

ಚಾಮರಾಜನಗರ: ಕಾಡು ಹಂದಿ ಬೇಟೆಗಾಗಿ ಕಾಡಿನಂಚಿನ ಗ್ರಾಮಗಳಲ್ಲಿ ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ಇಡಲಾಗುತ್ತಿದ್ದು, ಇದನ್ನು ಸೇವಿಸಿ ಜಾನುವಾರು ಮತ್ತು ವನ್ಯಜೀವಿಗಳು ಮೃತಪಡುತ್ತಿರುವ ದೂರುಗಳಿದ್ದು, ಈ ಬಗ್ಗೆ ಸೂಕ್ತ ನಿಗಾ ಇಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಕೊಳ್ಳೆಗಾಲದ ಕೀರ್ತಿಚಕ್ರ ಪಿ ಶ್ರೀನಿವಾಸ್ ಅತಿಥಿಗೃಹದಲ್ಲಿಂದು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಚ್ಚಾ ಬಾಂಬ್ ತಿಂದು ಹಲವು ಆನೆಯ ಮರಿಗಳ ಬಾಯಿಯಲ್ಲೇ ಸ್ಫೋಟವಾಗಿ, ದವಡೆ ಛಿದ್ರವಾಗಿ, ಹಸಿವಿನಿಂದ ಬಳಲಿ ಸಾಯುತ್ತಿವೆ ಎಂದು ವರದಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆ ರೀತಿ ಬಾಂಬ್ ಇಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನಿರ್ದೇಶಿಸಿದರು.

ಕಾಡಲ್ಲಿ ಬಿದಿರು ಬೆಳೆಸಲು ಸೂಚನೆ

ಕಾವೇರಿ ವನ್ಯಜೀವಿ ವಿಭಾಗದಲ್ಲಿ ಸಮೃದ್ಧವಾಗಿ ಬಿದಿರು ಬೆಳೆಸಲಾಗಿದೆ, ಬಿದಿರು ಸ್ವಾಭಾವಿಕ ಮತ್ತು ಜೈವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಆನೆಗಳಿಗೆ ಆಹಾರವೂ ಆಗುತ್ತದೆ. ಜೊತೆಗೆ ಆನೆಗಳು ನಾಡಿಗೆ ಬಾರದಂತೆ ತಡೆಯುತ್ತದೆ. ಇದನ್ನು ಬೇರೆ ವಲಯದಲ್ಲಿ ಬೆಳೆಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಅರಣ್ಯದೊಳಗಿನ ಹೋಂಸ್ಟೇ, ರೆಸಾರ್ಟ್ ತೆರವಿಗೆ ಸೂಚನೆ

ಅರಣ್ಯದೊಳಗೆ ಮತ್ತು ಸೂಕ್ಷ್ಮ ಪರಿಸರ ವಲಯದಲ್ಲಿ ಹೋಂ ಸ್ಟೇ ಹೆಸರಲ್ಲಿ ಶಾಶ್ವತ ರೆಸಾರ್ಟ್ ಕಟ್ಟಡ ತಲೆ ಎತ್ತುತ್ತಿದೆ ಎಂದು ದೂರುಗಳು ಬಂದಿದ್ದು, ಇವುಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆಯೂ ನಿರ್ದೇಶನ ನೀಡಿದರು.

ಸಭೆಯಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮೊದಲಾದವರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News