×
Ad

ಮೇ 21ರಂದು ವಿಧಾನಸೌಧದ ಮುಂದೆ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆಗಳ ಹಸ್ತಾಂತರ : ಈಶ್ವರ್ ಖಂಡ್ರೆ

Update: 2025-05-18 17:57 IST

ಈಶ್ವರ್ ಖಂಡ್ರೆ

ಬೆಂಗಳೂರು : ನೆರೆಯ ಆಂಧ್ರಕ್ಕೆ ಮೇ 21ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದ್ದು, ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ವಿಧ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡುವರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತರ್‌ ರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ-ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಕಳೆದ ವರ್ಷ ಆ.8ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆ.27ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೇ 21ರಂದು ಈ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ: ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದ್ದು, ನೆರೆಯ ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರದಿಂದ ರಾಜ್ಯಕ್ಕೂ ಪರೋಕ್ಷವಾಗಿ ಲಾಭವಾಗಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ದಸರಾ ಆನೆ ಹಸ್ತಾಂತರ ಇಲ್ಲ: ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎಂದು ಅವರು ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News