ಹಸಿರು ಹೊದಿಕೆ ಸಂವರ್ಧನೆಗೆ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಣೆ: ಈಶ್ವರ್ ಖಂಡ್ರೆ
ಬೆಂಗಳೂರು : ಉದ್ಯಾನನಗರಿ, ನಿವೃತ್ತರ ಸ್ವರ್ಗ ಬೆಂಗಳೂರು ನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಹಸಿರು ಹೊದಿಕೆ ಸಂವರ್ಧನೆಗಾಗಿ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಿಸಲು ಕ್ರಮ ವಹಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಾಡುಗೋಡಿ ಪ್ಲಾಂಟೇಷನ್ ನ 120 ಎಕರೆ ಅರಣ್ಯ ಭೂಮಿ ಮರುವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯ ಭೂಮಿಯನ್ನು ಹಂಚಿಕೆ, ಮಂಜೂರು ಮಾಡಲು ಬರುವುದಿಲ್ಲ. ಅರಣ್ಯೇತರ ಉದ್ದೇಶಕ್ಕೆ ಅರಣ್ಯಭೂಮಿ ಬಳಸಲು ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಅನುಮತಿ ಕಡ್ಡಾಯ ಎಂದರು.
ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂ.1ರಲ್ಲಿ 711 ಎಕರೆಯನ್ನು ನೆಡುತೋಪಿಗಾಗಿ 1896 ರಲ್ಲಿ ನೀಡಲಾಗಿತ್ತು. ಬಳಿಕ 1901ರಲ್ಲಿ ಅರಣ್ಯ ನಿಯಮಗಳು 1900ರ ರೀತಿ ರಾಜ್ಯ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ. ಅಧಿಸೂಚಿತ ಅರಣ್ಯ ಮೀಸಲು ಅರಣ್ಯವಾಗಿರುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಯಾವುದೇ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪೂರ್ವಾನುಮತಿ ಇಲ್ಲದೆ ಮಂಜೂರು ಮಾಡಬಾರದು ಎಂದು ಕೇಂದ್ರ ಸರಕಾರವೇ ಜಾರಿ ಮಾಡಿರುವ ಕಾಯಿದೆ ಹೇಳುತ್ತದೆ. ಸರ್ವೋಚ್ಛ ನ್ಯಾಯಾಲಯ ಕೂಡ ಕಾಲಕಾಲಕ್ಕೆ ಈ ಸಂಬಂಧ ಸ್ಪಷ್ಟ ತೀರ್ಪು, ಆದೇಶ ನೀಡಿದೆ ಎಂದು ಅವರು ಹೇಳಿದರು.
‘ಹುಲಿ ಸಾವು’ ಅಧಿಕಾರಿಗಳ ನಿರ್ಲಕ್ಷ್ಯ ಸಾಬೀತಾದರೆ ಶಿಸ್ತು ಕ್ರಮ: ಐದು ಹುಲಿಗಳ ಅಸಹಜ ಸಾವಿನ ಕುರಿತಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿರುದ್ಧ ಕಾನೂನು ರೀತಿ ಕ್ರಮ ಆಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಿಲ್ಲಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.