ನೋಟುಗಳ ಮೇಲೆ ಅಂಬೇಡ್ಕರ್ ಭಾವಚಿತ್ರ ಮುದ್ರಣ; ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆಗೆ ಸಿದ್ಧತೆ: ಸಭಾಪತಿ ಸಲೀಂ ಅಹ್ಮದ್
"ವಿಧಾನ ಪರಿಷತ್ ಸದಸ್ಯ ಬಿ.ಎಸ್.ಶಿವಣ್ಣರಿಂದ ಮಸೂದೆ ಮಂಡನೆ"
ಡಾ.ಬಿ.ಆರ್.ಅಂಬೇಡ್ಕರ್ | ಸಲೀಂ ಅಹ್ಮದ್ | ಬಿ.ಎಸ್.ಶಿವಣ್ಣ
ಬೆಂಗಳೂರು, ನ.26: ಗರಿಷ್ಠ ಮುಖಬೆಲೆ ಸೇರಿದಂತೆ ಎಲ್ಲ ಮಾದರಿಯ ನೋಟುಗಳ ಮೇಲೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಮುದ್ರಣ ಮಾಡಬೇಕು ಎಂದು ಆಗ್ರಹಿಸಿ ಡಿ.2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಮೂರಕ್ಕೂ ಅಧಿಕ ಖಾಸಗಿ ಮಸೂದೆಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಎಸ್.ಶಿವಣ್ಣ ಭಾರತೀಯ ಚಲಾವಣೆ(ರೂಪಾಯಿ) ನೋಟುಗಳ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಿಸಲು ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್(RBI)ಗೆ ಶಿಫಾರಸು ಮಾಡುವ ನಿರ್ಣಯ ಕುರಿತು ಖಾಸಗಿ ಮಸೂದೆ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಮಸೂದೆ ಮಂಡನೆ ಆದ ಬಳಿಕ ಮೇಲ್ಮನೆಯಿಂದ ಅಧಿಕೃತವಾಗಿ ರಾಷ್ಟ್ರಪತಿ ಹಾಗೂ ಆರ್ಬಿಐ ಅವರಿಗೂ ರವಾನೆ ಮಾಡಲಾಗುವುದು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಗೌರವಿಸುವ ಜತೆಗೆ ಅವರ ಕೊಡುಗೆ, ವಿಚಾರಧಾರೆಗಳನ್ನು ಉಳಿಸುವ ನಿಟ್ಟಿನಲ್ಲಿ ಗರಿಷ್ಠ ಮುಖಬೆಲೆ ಸೇರಿದಂತೆ ಎಲ್ಲ ಮಾದರಿಯ ನೋಟುಗಳ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಮುದ್ರಣ ಮಾಡಬೇಕು ಎನ್ನುವುದು ಬಿ.ಎಸ್.ಶಿವಣ್ಣ ಅವರ ಮಂಡನೆ ಮಾಡಲಿರುವ ಮಸೂದೆಯ ಉದ್ದೇಶವಾಗಿದೆ ಎಂದರು.
ಜೊತೆಗೆ, ಈ ಬಾರಿಯ ಅಧಿವೇಶನದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಎಲ್ಲ ಮಾದರಿಯ ಸಾಲಗಳನ್ನು ಮನ್ನಾ ಮಾಡಬೇಕು. ವಿಕಲಚೇತನರ ಸಮಸ್ಯೆಗಳನ್ನು ಬಗೆಹರಿಸುವ ಖಾಸಗಿ ಮಸೂದೆಗಳನ್ನು ಸಹ ಮೇಲ್ಮನೆಯಲ್ಲಿ ಮಂಡನೆ ಆಗಲಿವೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ನೋಟುಗಳ ಮೇಲೆ ಅಂಬೇಡ್ಕರ್ ಚಿತ್ರ: ಖಾಸಗಿ ಮಸೂದೆ ಮಂಡನೆ ಸಂಬಂಧ ವಿಧಾನ ಪರಿಷತ್ತಿನ ಕಾಂಗ್ರೆಸ್ ಬಿ.ಎಸ್.ಶಿವಣ್ಣ ಪ್ರಸ್ತಾಪ ಸಲ್ಲಿಕೆ ಮಾಡಿದ್ದು, ಇದರಲ್ಲಿ ಭಾರತೀಯ ಹಣಕಾಸು ವ್ಯವಸ್ಥೆ, ಸಾಮಾಜಿಕ ಚೌಕಟ್ಟು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ನಿರ್ಮಾಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾಗಿದೆ. ಭಾರತದಲ್ಲಿ ಪ್ರಸಕ್ತ ಚಲಾವಣೆಯಲ್ಲಿರುವ ರೂಪಾಯಿ ನೋಟುಗಳ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರದೊಂದಿಗೆ, ಭಾರತದ ಆರ್ಥಿಕ ವ್ಯವಸ್ಥೆಯ ಪಿತಾಮಹ ಮತ್ತು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಮುದ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಮೆರಿಕ, ಬ್ರಿಟನ್ನಂತಹ ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ಕರೆನ್ಸಿ ನೋಟುಗಳಲ್ಲಿ ತಮ್ಮ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ವಿವಿಧ ಮಹಾನ್ ನಾಯಕರು ಮತ್ತು ಆರ್ಥಿಕ ತಜ್ಞರ ಚಿತ್ರಗಳನ್ನು ಮುದ್ರಿಸುವ ಪದ್ಧತಿ ಇದೆ. ಭಾರತದಲ್ಲೂ ಅದೇ ಮಾದರಿಯನ್ನು ಅನುಸರಿಸುವುದು ಇಂದಿನ ಅಗತ್ಯವಾಗಿದೆ. ಈ ನ್ಯಾಯಯುತ ಬೇಡಿಕೆಯನ್ನು ದೇಶಾದ್ಯಂತ ಅರ್ಥಶಾಸ್ತ್ರಜ್ಞರು, ಸಾಮಾಜಿಕ ಚಿಂತಕರು ಮತ್ತು ಸಾರ್ವಜನಿಕರು ಬಹಳ ಹಿಂದಿನಿಂದಲೂ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ನಿರ್ಣಯವು ಕರ್ನಾಟಕ ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟು ಕೇಂದ್ರವನ್ನು ತಲುಪಿದರೆ, ಅದು ರಾಷ್ಟ್ರಮಟ್ಟದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಆದ್ದರಿಂದ ಆರ್ಬಿಐ ಸ್ಥಾಪನೆಗೆ ತಾತ್ವಿಕ ಅಡಿಪಾಯವನ್ನು ಒದಗಿಸಿದ, ಪ್ರಖ್ಯಾತ ಆರ್ಥಿಕ ತಜ್ಞ ಮತ್ತು ಭಾರತದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಶಿಷ್ಟ ರಾಷ್ಟ್ರೀಯ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರ ಭಾವಚಿತ್ರವನ್ನು ಮುದ್ರಿಸಲು ಕೇಂದ್ರ ಸರಕಾರ ಮತ್ತು ಆರ್ಬಿಐಗೆ ಶಿಫಾರಸು ಮಾಡಬೇಕೆಂದು ಅವರು ಉಲ್ಲೇಖಿಸಿದ್ದಾರೆ.