ಬೆಂಗಳೂರು |ಸರಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ಗಲಾಟೆ: ಗುಂಡಿಕ್ಕಿ ಯುವಕನ ಹತ್ಯೆ
ಲಿಖಿತ್ ಗೌಡ
ಬೆಂಗಳೂರು: ಆಶ್ರಯ ಯೋಜನೆಗೆ ಮೀಸಲಿದ್ದ ಜಮೀನು ಒತ್ತುವರಿ ತೆರವು ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಓರ್ವನನ್ನ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೋಲೂರಿನಲ್ಲಿ ನಡೆದಿದೆ.
ಲಿಖಿತ್ ಗೌಡ(25) ಕೊಲೆಯಾದ ಯುವಕ. ರಮೇಶಪ್ಪ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಆರೋಪಿ ರಮೇಶಪ್ಪ ಹಾಗೂ ಮೃತ ಲಿಖಿತ್ ಗೌಡ ಸೋಲೂರಿನ ನಿವಾಸಿಗಳು ಹಾಗೂ ಒಂದೇ ಸಮುದಾಯಕ್ಕೆ ಸೇರಿದವರು. ಈ ಪೈಕಿ ರಮೇಶಪ್ಪ ಸುಮಾರು 10 ಗುಂಟೆ ಸರಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದ. ಆದರೆ ಇದೇ ಜಮೀನು ಆಶ್ರಯ ಯೋಜನೆಗೆ ಮಂಜೂರಾಗಿತ್ತು.
ಇಂದು ಲಿಖಿತ್ ಗೌಡ ಸೇರಿದಂತೆ ಕೆಲ ಊರಿನ ಗ್ರಾಮಸ್ಥರು ಆಶ್ರಯ ಯೋಜನೆಗೆ ಸೇರಿದ ಜಮೀನು ಮಾರ್ಕ್ ಮಾಡಲು ತೆರಳಿದ್ದಾರೆ. ಈ ವೇಳೆ ರಮೇಶಪ್ಪ ಹಾಗೂ ಲಿಖಿತ್ ಗೌಡ ನಡುವೆ ಜಗಳ ಆಗಿದೆ. ಈ ವೇಳೆ ರಮೇಶಪ್ಪ ತನ್ನ ಬಳಿ ಇದ್ದ ಲೈಸೆನ್ಸ್ ಇದ್ದ ಬಂದೂಕಿನಿಂದ ಲಿಖಿತ್ ಗೌಡ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಪ್ರಕರಣ ದಾಖಲಿಸಿರುವ ಹೊಸಕೋಟೆ ಪೊಲೀಸರು ರಮೇಶಪ್ಪನ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.