×
Ad

ಕರ್ನಾಟಕದಲ್ಲಿ ಯುವ ಆಯೋಗದ ಸ್ಥಾಪನೆಗೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ ಆಗ್ರಹ

Update: 2025-12-30 23:10 IST

ಡಾ.ನಸೀಮ್ ಅಹ್ಮದ್

ಬೆಂಗಳೂರು : ರಾಜ್ಯದಲ್ಲಿ ಯುವ ಆಯೋಗವನ್ನು ಸ್ಥಾಪಿಸುವಂತೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ.ನಸೀಮ್ ಅಹ್ಮದ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಇದರಿಂದ ಯುವಕರಿಗೆ ಎದುರಾಗುತ್ತಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಆರೋಗ್ಯ ಮತ್ತು ಉದ್ಯೋಗ ಸಂಬಂಧಿತ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೇರಳ, ಅಸ್ಸಾಂ, ಮಿಜೋರಾಂ ಮತ್ತು ಬಿಹಾರ ರಾಜ್ಯಗಳ ಅನುಭವಗಳು, ಯುವ ಆಯೋಗಗಳು ಯುವಕರ ಹಕ್ಕುಗಳ ರಕ್ಷಣೆ, ನೀತಿ ರೂಪಣೆ, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಮಾದಕ ವ್ಯಸನ ವಿರೋಧಿ ಕ್ರಮಗಳು ಮತ್ತು ಮಾನಸಿಕ ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಇನ್ನೂ ಯುವ ಆಯೋಗ ಸ್ಥಾಪನೆಯಾಗದೆ ಇರುವುದು ಅತ್ಯಂತ ವಿಷಾದಕರ ಹಾಗೂ ಯುವಕರ ಮೇಲಿನ ಅನ್ಯಾಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಸ್ತುತ ಸರಕಾರವು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸುವುದಾಗಿ ಘೋಷಣೆ ಮಾಡಿತ್ತು. ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ ಸಂಘಟನೆಯ ಬೇಡಿಕೆಯೇನೆಂದರೆ, ಸರಕಾರವು ತನ್ನ ಚುನಾವಣಾ ಭರವಸೆಯನ್ನು ಕಾರ್ಯರೂಪಕ್ಕೆ ತಂದು ತಕ್ಷಣ ಯುವ ಆಯೋಗ ಸ್ಥಾಪನೆಯ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಎರಡು ಕೋಟಿಗೂ ಅಧಿಕ ಯುವ ಜನಸಂಖ್ಯೆ ಇದೆ. ಇಂದು ಯುವಕರು ನಿರುದ್ಯೋಗ, ಶಿಕ್ಷಣದಲ್ಲಿನ ಅಸಮಾನತೆ, ಮಾದಕ ವಸ್ತುಗಳ ಹೆಚ್ಚುತ್ತಿರುವ ಬಳಕೆ, ಮಾನಸಿಕ ಒತ್ತಡ, ಆತ್ಮಹತ್ಯೆಗಳ ಆತಂಕಕಾರಿ ಪ್ರಕರಣಗಳು ಮತ್ತು ರಾಜಕೀಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದ ಕೊರತೆ ಮುಂತಾದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯುವಜನಸಂಖ್ಯೆಯ ಪ್ರಮಾಣ ಮತ್ತು ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಂಕಷ್ಟವನ್ನು ಗಮನಿಸಿದರೆ, ಇನ್ನಷ್ಟು ವಿಳಂಬ ಅಸ್ವೀಕಾರಾರ್ಹ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಸಬಲ, ಸ್ವಾಯತ್ತ ಹಾಗೂ ಜವಾಬ್ದಾರಿಯುತ ಯುವ ಆಯೋಗ ಅನಿವಾರ್ಯವಾಗಿದೆ. ಇದು ರಾಜ್ಯದ ಯುವ ನೀತಿಯ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಯುವಕರ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆಗಳ ತನಿಖೆ, ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕುರಿತು ಶಿಫಾರಸುಗಳು, ಮಾನಸಿಕ ಆರೋಗ್ಯ, ವ್ಯಸನ ವಿರೋಧಿ ಕ್ರಮಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ಪರಿಣಾಮಕಾರಿ ಕಾರ್ಯತಂತ್ರ, ಯುವಕರ ದೂರುಗಳ ಪರಿಹಾರಕ್ಕೆ ವ್ಯವಸ್ಥಿತ ಮತ್ತು ಪಾರದರ್ಶಕ ವ್ಯವಸ್ಥೆ, ಯುವಕರ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವವನ್ನು ಉತ್ತೇಜಿಸುವ ಕ್ರಮಗಳು, ರಾಜ್ಯಮಟ್ಟದ ಆಯ್ಕೆಯಾದ ಸಂಸ್ಥೆಗಳು (ವಿಧಾನಸಭೆ/ವಿಧಾನಪರಿಷತ್) ಹಾಗೂ ವಿವಿಧ ನಾಮನಿರ್ದೇಶಿತ ಸಂಸ್ಥೆಗಳಲ್ಲಿ ಯುವಕರ ಪ್ರತಿನಿಧಿತ್ವವನ್ನು ಖಚಿತಪಡಿಸುವುದು, ಜೊತೆಗೆ ಕಾರ್ಪೋರೇಷನ್‌ಗಳು, ಬೋರ್ಡ್‌ಗಳು, ಸಮಿತಿಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಸಮರ್ಪಕ ಯುವ ಪ್ರತಿನಿಧಿತ್ವಕ್ಕಾಗಿ ಸ್ಪಷ್ಟ ಶಿಫಾರಸುಗಳು ಮತ್ತು ಕಾರ್ಯವಿಧಾನ ರೂಪಿಸುವುದು ಸೇರಿದಂತೆ ಪ್ರಸ್ತಾವಿತ ಯುವ ಆಯೋಗಕ್ಕೆ ಈ ಅಧಿಕಾರಗಳು ಮತ್ತು ಜವಾಬ್ದಾರಿಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಮತ್ತು ಶಾಸಕರು ಯುವಕರ ಭವಿಷ್ಯವನ್ನು ಸುರಕ್ಷಿತಗೊಳಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಲು ಯುವ ಆಯೋಗ ಸ್ಥಾಪನೆಯ ತುರ್ತು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News