ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು: ವಾರ್ಷಿಕ ಪ್ರಶಸ್ತಿಗೆ ಸುಗಂಧಿ ಉಮೇಶ್ ಕಲ್ಮಾಡಿ ಆಯ್ಕೆ
ಸುಗಂಧಿ ಉಮೇಶ್ ಕಲ್ಮಾಡಿ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇದರ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ನಾಟ್ಕದೂರು ಮುದ್ರಾಡಿ (ಕಾರ್ಕಳ)ಯ ಸುಗಂಧಿ ಉಮೇಶ್ ಕಲ್ಮಾಡಿ ಆಯ್ಕೆಯಾಗಿದ್ದರೆ.
ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಯಾಗಿದ್ದ ದಿ. ಮೋಹನ್ ಪಾತ್ರಿ ಮತ್ತು ಕಮಲ ದಂಪತಿಯ ಪುತ್ರಿ ಸುಗಂಧಿ ಉಮೇಶ್ ಕಲ್ಮಾಡಿ ಅವರು ಬಾಲ್ಯದಿಂದಲೇ ಹಲವಾರು ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ನಂತರ ತಮ್ಮ ಕುಟುಂಬದ ನಾಟಕ ತಂಡ ‘ನಮ್ಮ ತುಳುವೆರ್’ ಕಲಾ ಸಂಘಟನೆಯ, ಡಾ. ಚಂದ್ರಶೇಖರ್ ಕಂಬಾರರ ‘ಸಿರಿಸಂಪಿಗೆ’ ನಾಟಕದ ಮೂಲಕ ಮುನ್ನೆಲೆಗೆ ಬಂದರು.
ಮುಂದೆ ರಾಜ್ಯದ ಹಲವು ಹಿರಿಯ ನಿರ್ದೇಶಕರಿಂದ ನಿರ್ದೇಶಿಸಲ್ಪಟ್ಟ ದಂಗೆಯ ಮುಂಚಿನ ದಿನಗಳು, ಪಿಲಿಪತ್ತಿ ಗಡಸ್ (498 ಪ್ರದರ್ಶನ) ಆರ್ ಬರ್ಪೆರ್, ಹುಲಿಯ ನೆರಳು, ಅಶುದ್ಧ, ಕಾಳಾಪುರ ಖಿಲೇಸಿ, ಧರ್ಮೇತ್ತಿ ಮಾಯೆ, ದೊಂಬರ ಚಿನ್ನಿ, ಮೀಡಿಯಾ, ಬದುಕೆರೆ ಆಪುಜಿ, ಹೂವು (50 ಪ್ರದರ್ಶನ) ಕಿಟ್ಟಪ್ಪನ ಕಿತಾಪತಿ, ಪೀಠಾರೋಹಣ(18 ಪ್ರದರ್ಶನ) ಪಂಪನಿಗೆ ಬಿದ್ದ ಕನಸು, ಮೂರು ಹೆಜ್ಜೆ ಮೂರು ಲೋಕ (250 ಪ್ರದರ್ಶನ), ಒಂದು ಚೂರಿಯ ಕಥೆ, ದಶಾನನ ಸ್ವಪ್ನ ಸಿದ್ದಿ(75 ಪ್ರದರ್ಶನ), ಅಣ್ಣಾವಾಲಿ, ಅವ್ವ ನನ್ನವ್ವ (200 ಪ್ರದರ್ಶನ) ಮುಂತಾದ 50ಕ್ಕೂ ಹೆಚ್ಚು ನಾಟಕಗಳಲ್ಲಿ ಕಥಾ ನಾಯಕಿಯ ಪಾತ್ರಗಳಲ್ಲಿ ಅಭಿನಯಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಪಡೆದವರು.
ಅಲ್ಲದೆ ಸಾಮಾಜಿಕ ಕಾಳಜಿಯೊಂದಿಗೆ ತಮ್ಮ ಕುಟುಂಬದ ತಂಡದೊಂದಿಗೆ ರಾಜ್ಯಾದ್ಯಂತ ಏಡ್ಸ್ ಎಚ್ಚರಿಕೆ, ಬಾಲ್ಯ ವಿವಾಹ, ಬಾಲ ಕಾರ್ಮಿಕರ ಬಗ್ಗೆ, ಸ್ತ್ರೀಶಕ್ತಿ ಬಲವರ್ದನೆ, ವಿದ್ಯುತ್ ದುರುಪಯೋಗ, ಸ್ವಚ್ಛತೆಯ ಅರಿವು ಮುಂತಾದ ಸಮಸ್ಯೆಗಳ ಬಗ್ಗೆ ಬೀದಿ ನಾಟಕಗಳ ಮುಖೇನ ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು.