ಕೆ.ದೀಪಕ್, ಗುರುಪ್ರಸಾದ್ ಕೆರಗೋಡು, ಬದ್ರುದ್ದೀನ್ ಕೆ.,ಯತಿರಾಜ್ ಬಿ.ಸಿ.

ಬೆಂಗಳೂರು, ಸೆ. 3: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ (ರಿ), ಬೆಂಗಳೂರು ವತಿಯಿಂದ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕಳೆದ 26 ವರ್ಷಗಳಿಂದ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿರುವ ದಲಿತ ಮಾಲಕತ್ವ ಮತ್ತು ಸಂಪಾದಕತ್ವದ ಪತ್ರಿಕೆಗಳ ಹಿತಾಸಕ್ತಿ ಕಾಪಾಡುವ ಹಾಗೂ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವ ಉದ್ದೇಶದಿಂದ ಸಂಘ ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ದಲಿತರು, ಶೋಷಿತರ ಪರವಾಗಿ ಸೇವೆ ಸಲ್ಲಿಸಿದ ಹಿರಿಯ ಹಾಗೂ ಉದಯೋನ್ಮುಖ ಪತ್ರಕರ್ತರು ಮತ್ತು ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಸಂಘ ಮುಂದುವರಿಸಿದೆ.

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ದಲಿತ ಚಳವಳಿಯ ನಾಯಕ ಪ್ರೊ.ಬಿ.ಕೃಷ್ಣಪ್ಪ, ಮಾಜಿ ಸಚಿವರಾದ ಬಿ.ಬಸವಲಿಂಗಪ್ಪ ಹಾಗೂ ಬಿ.ರಾಚಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗಳಿಗೆ ತಲಾ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ.

ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪುರಸ್ಕೃತರು :

ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ : ಕೆ.ದೀಪಕ್, ಸಂಪಾದಕರು ವಿಜಯ ಕಾಲ ಕನ್ನಡ ದಿನಪತ್ರಿಕೆ, ಮೈಸೂರು.

ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿ : ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಂಡ್ಯ.

ಬಿ.ರಾಚಯ್ಯ ದತ್ತಿ ಪ್ರಶಸ್ತಿ : ಬದ್ರುದ್ದೀನ್ ಕೆ., ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತರು.

ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿ : ಯತಿರಾಜ್ ಬಿ.ಸಿ. (ಯತಿರಾಜ್ ಬ್ಯಾಲಹಳ್ಳಿ), ಪತ್ರಕರ್ತರು, ಬೆಂಗಳೂರು.

ಸಂಪಾದಕರಿಗೆ ಗೌರವ ಪ್ರಶಸ್ತಿಗಳು :

2025ನೇ ಸಾಲಿನ ಗೌರವ ಪ್ರಶಸ್ತಿಗೆ ಚಂದ್ರಣ್ಣ (ಕರ್ನಾಟಕ ಎಕ್ಸ್‌ಪ್ರೆಸ್, ದಾವಣಗೆರೆ), ದೇವೇಂದ್ರಪ್ಪ ಕಪ್ಪನೂರು (ಬುದ್ಧಲೋಕ, ಗುಲ್ಬರ್ಗಾ), ಬಿ.ಓ.ಕರಿಯಮ್ಮ (ಜಗಳೂರು ವಾಯ್ಸ್, ದಾವಣಗೆರೆ), ಸುಭಾಷ್ ಹೊದ್ಲೂರು (ಸುದಿನ ಕನ್ನಡ ದಿನಪತ್ರಿಕೆ, ಬಾಗಲಕೋಟೆ) ಹಾಗೂ ಅನೂಪ್ ಕುಮಾರ್ (ಬಳ್ಳಾರಿ ಬೆಳಗಾಯಿತು, ಬಳ್ಳಾರಿ) ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಸೆ.17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರಿಗೆ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸೋಮಶೇಖರ ಗಾಂಧಿ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor