ಗೋಶಾಲೆಯಲ್ಲಿ ಗೋಮೂತ್ರ ಯಾಕೆ ಸೇವಿಸುತ್ತಿಲ್ಲ, ಗಣವೇಶ ಯಾಕೆ ಧರಿಸಿಲ್ಲ? : ಆರ್.ಅಶೋಕ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಮಾತನಾಡುವಂತೆ ಆಗ್ರಹ
ಪ್ರಿಯಾಂಕ್ ಖರ್ಗೆ, ಆರ್.ಅಶೋಕ್
ಬೆಂಗಳೂರು : ಆರೆಸ್ಸೆಸ್ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು ಆರ್. ಅಶೋಕ್ ಅವರು ಗೋಶಾಲೆಯಲ್ಲಿ ಗೋಮೂತ್ರ ಯಾಕೆ ಸೇವಿಸುತ್ತಿಲ್ಲ, ಗಣವೇಶ ಯಾಕೆ ಧರಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ಅಶೋಕ್ ಅಣ್ಣಾ, ಆರೆಸ್ಸೆಸ್ ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ. ಆದರೆ, ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ” ಎಂದು ಹೇಳಿದ್ದಾರೆ.
“ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ? ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ಮರಿ ಅಶೋಕ್ ಇನ್ನೂ ಧರ್ಮರಕ್ಷಕನಾಗಿ ಏಕೆ ಆಗಿಲ್ಲ?” ಎಂದು ವ್ಯಂಗ್ಯವಾಡಿದ್ದಾರೆ.
ಇದರ ಜೊತೆಗೆ, “ಹಿರಿ ಅಶೋಕ್ ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ?” ಎಂದು ಪ್ರಶ್ನಿಸಿರುವ ಅವರು, ಕೆಪಿಎಸ್‌ಸಿ ನೇಮಕಾತಿ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
“ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತೀರಿ? ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ? ಕೆಪಿಎಸ್‌ಸಿ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ನಾಯಕರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಯಾವಾಗ ಮಾತನಾಡುತ್ತೀರಿ? ನಿಮ್ಮ ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ನೀವು ಯಾವಾಗ ಮಾತನಾಡುತ್ತೀರಿ?” ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.