ದಲಿತ ಸಮಾವೇಶ ಅವಶ್ಯಕ : ಕೆ.ಎಚ್.ಮುನಿಯಪ್ಪ
Update: 2025-02-19 21:01 IST
ಬೆಂಗಳೂರು : ದಲಿತ ಸಮಾವೇಶ ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ಈ ಪ್ರಸ್ತುತದಲ್ಲಿ ದಲಿತ ಸಮಾವೇಶ ಮಾಡುವುದು ಅವಶ್ಯಕತೆ ಇದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ದಲಿತ ಸಮಾವೇಶ ಮಾಡುವ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ಸಮಾವೇಶ ಮಾಡುವ ಬಗ್ಗೆ ಹೈಕಮಾಂಡ್‍ಗೆ ಮನವಿ ಮಾಡಲಾಗಿದೆ. ಹೈಕಮಾಂಡ್ ಒಪ್ಪಿದರೆ ದಲಿತ ಸಮಾವೇಶ ಮಾಡಲಾಗುವುದು ಎಂದರು.
ದಲಿತ ಸಮಾವೇಶ ಮಾಡಬೇಡಿ ಎಂದು ಹೈಕಮಾಂಡ್ ಏನು ಹೇಳಿಲ್ಲ. ಸಮಾವೇಶ ಮಾಡಬೇಕೆಂದು ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ್ ಸೇರಿ ಹಲವರು ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ. ಈ ಹಿಂದೆ ಚಿತ್ರದುರ್ಗದಲ್ಲಿ ಮಾಡಿದ್ದ ಎಸ್ಸಿ-ಎಸ್ಟಿ ಸಮಾವೇಶ ಯಶಸ್ವಿಯಾಗಿತ್ತು. ಅದರಿಂದ ನಮಗೆ ಹೆಚ್ಚು ಲಾಭ ಆಗಿತ್ತು. ಹೀಗಾಗಿ ಈ ಸಂದರ್ಭದಲ್ಲೂ ಸಮಾವೇಶ ಮಾಡುವ ಅವಶ್ಯಕತೆ ಇದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.