ಪರಿಶಿಷ್ಟ ಜಾತಿ ಕುಟುಂಬಗಳು ಸಮೀಕ್ಷೆಯಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಬೇಕು : ಕೆ.ಎಚ್.ಮುನಿಯಪ್ಪ
ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ನ್ಯೂನತೆಗಳಿಂದಾಗಿ ಪರಿಶಿಷ್ಟ ಜಾತಿ ಜನಗಣತಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಸಮುದಾಯದ ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ವಂಚಿತರಾಗದಂತೆ ಜನರಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕರೆ ನಿಡಿದ್ದಾರೆ.
ಮಂಗಳವಾರ ಗಾಂಧಿ ಭವನದಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮಾದಿಗ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಅಂದಾಜು 15ಲಕ್ಷದಷ್ಟು ಸಮುದಾಯದ ಜನಸಂಖ್ಯೆ ಇದೆ. ಸರ್ವರ್ ತಾಂತ್ರಿಕ ಸಮಸ್ಯೆ, ಸಮೀಕ್ಷೆದಾರರು ಬಾಡಿಗೆ ಮನೆಗಳಿಗೆ ತೆರಳದಿರುವುದು ಮೊದಲಾದ ಕಾರಣದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆಯಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಶೇ.84ರಷ್ಟು ಸಮೀಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು, ಮೈಸೂರು, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಸಮೀಕ್ಷೆ ಪ್ರಮಾಣ ಶೇ.50 ದಾಟಿಲ್ಲ. ಕಟ್ಟಕಡೆಯ ಮನೆಯೂ ಸಮೀಕ್ಷೆಗೆ ಒಳಪಡಬೇಕು. ಹಾಗಾಗಿ ಸಮುದಾಯದ ಮುಖಂಡರು ತಂಡ ರಚಿಸಿಕೊಂಡು ಕ್ಷೇತ್ರವಾರು ಜನಜಾಗೃತಿ ಮೂಡಿಸಬೇಕು. ಸರ್ವರ್ ಸಮಸ್ಯೆ, ಸಮೀಕ್ಷೆಯಲ್ಲಿರುವ ನ್ಯೂನತೆಗಳ ಕುರಿತು ಎಚ್.ಆಂಜನೇಯ ನೇತೃತ್ವದ ನಿಯೋಗ ನಾಗಮೋಹನ್ ದಾಸ್ ಅವರ ಗಮನಕ್ಕೆ ತರಲಿದೆ. ಮೇ 28 ರಿಂದ ನಾನು ಕೂಡ ಯಲಹಂಕ, ಯಶವಂತಪುರ ಸೇರಿ ಕ್ಷೇತ್ರದ ಹಲವೆಡೆ ಪ್ರವಾಸ ಕೈಗೊಂಡು ಸಮುದಾಯದ ಜನತೆಗೆ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಮನೆ-ಮನೆ ಭೇಟಿ ಸಮೀಕ್ಷೆ ಇದೇ ಮೇ 29ರ ವರೆಗೆ ನಡೆಯಲಿದ್ದು, ಆನ್‍ಲೈನ್ ಮೂಲಕ ನೋಂದಣಿಗೆ ಜೂ.1ರ ವರೆಗೆ ಅವಕಾಶವಿದೆ. ತಪ್ಪದೇ ಮೂಲ ಜಾತಿಗಳನ್ನೇ ನೊಂದಾಯಿಸಬೇಕು. ಒಳಮೀಸಲಾತಿ ಕಲ್ಪಿಸುವ ಜಾತಿಗಣತಿ ಸಮುದಾಯದ ಅಳಿವು-ಉಳಿವಿನ ಜೊತೆಗೆ ಮಕ್ಕಳ ಭವಿಷ್ಯದ ಪ್ರಶ್ನೆ. ಸಮುದಾಯಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಲು ಒಳಮೀಸಲಾತಿ ಅತ್ಯಗತ್ಯ. ಹಾಗಾಗಿ ಯಾರೊಬ್ಬರು ನಿರ್ಲಕ್ಷ್ಯ ಮಾಡದೇ ಸಮಗ್ರ ಸಮೀಕ್ಷೆಯಲ್ಲಿ ಭಾಗವಹಿಸಿ ಮೂಲಜಾತಿಯನ್ನೇ ನೊಂದಾಯಿಸಬೇಕು. ತಾಂತ್ರಿಕ ಸಮಸ್ಯೆಗಳ ಕುರಿತು ವಾಸ್ತವತೆ ತಿಳಿದು ಸಮೀಕ್ಷೆ ದಿನಾಂಕ ವಿಸ್ತರಿಸುವ ಕುರಿತು ಚರ್ಚಿಸ ಮನವಿ ಸಲ್ಲಿಸಲಾಗುವುದು ಎಂದು ಮನಿಯಪ್ಪ ಹೇಳಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಜಾತಿಗಣತಿ ಸಮೀಕ್ಷೆಯಲ್ಲಿ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಪಾಲ್ಗೊಂಡು ಜಾಗೃತಿ ಮೂಡಿಸಬೇಕು. ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಗಳಲ್ಲಿರುವ ಕಾರಣ ಕೆಲವರು ಜಾತಿ ನಮೂದಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತವರಿಗೆ ಆನ್‍ಲೈನ್ ವ್ಯವಸ್ಥೆ ಇದೆ. ಸಮೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ನೂನ್ಯತೆ ಸರಿಪಡಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದಶಕಗಳ ಹೋರಾಟದ ಫಲವಾಗಿ ರಾಜ್ಯದಲ್ಲಿ ಒಳಮೀಸಲಾತಿ ಅನುಷ್ಠಾನಗೊಳ್ಳುತ್ತಿದೆ. ಸಮುದಾಯದವರು ತಪ್ಪದೇ ಸಮೀಕ್ಷೆಯಲ್ಲಿ ಪಾಲ್ಗೊಂಡು ಮೂಲ ಜಾತಿಯನ್ನೇ ನಮೂದಿಸಬೇಕು. ಬೆಂಗಳೂರು ನಗರದಲ್ಲಿ ಸಫಾಯಿ ಕರ್ಮಚಾರಿಗಳು ಸೇರಿದಂತೆ ಬಹುತೇಕರು ಸಮೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಇದು ಸಮುದಾಯದ ಸೌಲಭ್ಯಕ್ಕೆ ಪೆಟ್ಟು ನೀಡಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಮುಖಂಡರು ಸಂಘಟಿತರಾಗಿ ತಂಡ ರಚಿಸಿಕೊಂಡು ವಲಯವಾರು ಬೂತ್ ಮಟ್ಟದಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಂಸದ ಚಂದ್ರಪ್ಪ, ಮಾಜಿ ಎಂಎಲ್‍ಸಿ ಧರ್ಮಸೇನ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ ಬೀಮಪ್ಪ, ತೇಗನೂರು, ಬಾಬುರಾಮ ಹುಡಬಿ, ಭೀಮಶಂಕರ್, ವಿಜಯಸಿಂಹ, ಗೌತಮ್, ನಾರಾಯಣ್, ದೊಡ್ಡೇರಿ ವೆಂಕಟೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.