×
Ad

‘ಒಳಮೀಸಲಾತಿ’ ಸಮೀಕ್ಷೆ ಪರಿಣಾಮಕಾರಿಯಾಗಲು ಸಮುದಾಯದ ನಾಯಕರು ಕಾರ್ಯನಿರ್ವಹಿಸಿ : ಕೆ.ಎಚ್.ಮುನಿಯಪ್ಪ

Update: 2025-06-14 20:20 IST

ಕೆ.ಎಚ್.ಮುನಿಯಪ್ಪ 

ಬೆಂಗಳೂರು : ಒಳಮೀಸಲಾತಿ ಸಮಗ್ರ ಸಮೀಕ್ಷೆಯು ಪರಿಣಾಮಕಾರಿಯಾಗಿ ನಡೆಯಲು ಸಮುದಾಯದ ಸ್ವಾಮೀಜಿಗಳು, ರಾಜಕೀಯ ನಾಯಕರು, ಎಲ್ಲ ಮುಖಂಡರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.

ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮಾದಿಗ ಮತ್ತು ಸಂಬಂಧಿಸಿದ ಸಮುದಾಯಗಳ ಮುಖಂಡರೊಂದಿಗೆ ನಡೆದ ಜಾಗೃತಿ ಅಭಿಯಾನ ಸಂವಾದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿನ 101 ಉಪ ಜಾತಿಗಳ ದತ್ತಾಂಶ ಸಂಗ್ರಹಣೆಗಾಗಿ ಮೇ 6ರಿಂದ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆಯಿಂದ ಉಪ ಜಾತಿಯ ಮಾಹಿತಿಯನ್ನು ನೀಡಿದ್ದು ಸ್ವಾಗತಿಸುತ್ತೇನೆ. 30 ವರ್ಷಗಳ ಹೋರಾಟದ ಫಲವನ್ನು ಸದುಪಯೋಗ ಪಡಿಸಿಕೊಳ್ಳಲು ಸಮುದಾಯದ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.

ಬೆಂಗಳೂರು ನಗರದಲ್ಲಿ ಮಾದಿಗ ಮತ್ತು ಸಂಬಂಧಿಸಿದ ಸಮುದಾಯಗಳ ಜನಸಂಖ್ಯೆ ಹೆಚ್ಚಿದ್ದು, ಇಲ್ಲಿಯವರೆಗೂ ಶೇ.46ರಷ್ಟು ಜನಸಂಖ್ಯೆ ಮಾತ್ರ ತಮ್ಮ ಮೂಲ ಜಾತಿಯನ್ನು ನೋಂದಾಯಿಸಿದೆ. ಇನ್ನೂ ಹೆಚ್ಚಿನ ಜನ ನೋಂದಣಿ ಮಾಡದಿರುವ ಕಾರಣ ಸಮುದಾಯದ ಎಲ್ಲ ನಾಯಕರು, ಮುಖಂಡರು ಜಾಗೃತಿ ಜನರಿಗೆ ಮೂಡಿಸಿ ಸಮೀಕ್ಷೆ ಯಶಸ್ವಿಯಾಗಲು ಶ್ರಮಿಸಬೇಕು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಒಳಮೀಸಲಾತಿ ಸಮಗ್ರ ಸಮೀಕ್ಷೆ ಕಾರ್ಯದಲ್ಲಿ ಬೆಂಗಳೂರಿನ ನಾಗರಿಕರು ತಮ್ಮ ಕೆಲಸಗಳ ಒತ್ತಡದಿಂದ ಗಣತಿದಾರರಿಗೆ ಸಿಗಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ಕಾರಣದಿಂದಾಗಿ ಎಲ್ಲರಿಗೂ ಅನುಕೂಲವಾಗುವಂತೆ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಗಣತಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಮೇಯರ್ ನಾರಾಯಣ ಸೇರಿದಂತೆ ಪರಿಶಿಷ್ಟ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News