×
Ad

ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್: ಕೆ.ಜೆ.ಜಾರ್ಜ್

Update: 2025-03-10 20:34 IST

ಬೆಂಗಳೂರು: ರೈತರ ಕೃಷಿ ಪಂಪ್ ಸೆಟ್‍ಗಳಿಗೆ ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳಿಂದ ಹಗಲಿನ ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯುತ್ ಉಪ ಕೇಂದ್ರಗಳು ಇಲ್ಲದ ಕಡೆಗಳಲ್ಲಿ ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆಗಳ ಕಾಲ ಸೇರಿಸಿ ಪ್ರತಿ ದಿನ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಸದ್ಯ ವಿದ್ಯುತ್‍ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ರಾಜ್ಯದಲ್ಲಿ 2024-25ರಲ್ಲಿ ಅಂದಾಜಿಸಲಾದ ಬಳಕೆಯ ಬೇಡಿಕೆಯ ಪ್ರಮಾಣ 92,087 ಮೆಗಾ ಯುನೀಟ್ ಇದ್ದು, 2024ನೇ ಎಪ್ರಿಲ್‍ನಿಂದ 2024ನೇ ಡಿಸೆಂಬರ್ ಅಂತ್ಯದವರೆಗೆ (ಸರಾಸರಿ ದಿನವಹಿ ಬಳಕೆ) 235 ಮೆಗಾ ವ್ಯಾಟ್ ಯುನಿಟ್‍ಗಳಾಗಿರುತ್ತದೆ. ರಾಜ್ಯವು ಈಗಾಗಲೇ 18,365 ಮೆಗಾ ವ್ಯಾಟ್‍ನ ಗರಿಷ್ಠ ಬೇಡಿಕೆಯನ್ನು ಪೂರೈಸಿದ್ದು, ಈ ಪ್ರಮಾಣವು 19 ಸಾವಿರ ಮೆಗಾವ್ಯಾಟ್‍ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಅನ್ನು ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯು ಕಡಿಮೆ ಆದಲ್ಲಿ ಬ್ಯಾಂಕಿಂಗ್ ಸಿಸ್ಟಮ್‍ನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್‍ನ್ನು ಪಡೆದು ಬೇಡಿಕೆಯನ್ನು ಪೂರೈಸಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ವಿದ್ಯುತ್ ಜಲಾಶಯಗಳಲ್ಲಿ ನೀರಿನ ಲಭ್ಯತೆಯೂ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಉತ್ತಮವಾಗಿದೆ. ಬೇಸಿಗೆಯಲ್ಲಿ ಏರಿಕೆಯಾಗುವ ವಿದ್ಯುತ್ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಕೊರತೆ ನೀಗಿಸಲು ವಿದ್ಯುತ್ ವಿನಿಮಯ ಕೇಂದ್ರಗಳಿಂದ ದಿನವಹಿ ಆಧಾರದ ಮೇಲೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.

ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಕೃಷಿ ಫೀಡರ್‍ಗಳಿಗೆ ಹಗಲಿನ ವೇಳೆಯಲ್ಲಿಯೇ 7 ಗಂಟೆಗಳ ಕಾಲ ನಿರಂತರವಾಗಿ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್ ಜಾಲದಲ್ಲಿ ಅಡಚಣೆಯಾದಾಗ ಮಾತ್ರ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News