×
Ad

ಕೆಎಎಸ್‌ ಮುಖ್ಯ ಪರೀಕ್ಷೆಗೆ ಮೇ 2ರ ಮಧ್ಯರಾತ್ರಿ 12ಕ್ಕೆ ಹಾಲ್ ಟಿಕೆಟ್ ವಿತರಣೆ; ಕೆಪಿಎಸ್‌ಸಿ ನಡೆಗೆ ಬೇಸರ ಹೊರಹಾಕಿದ ಅಭ್ಯರ್ಥಿಗಳು

Update: 2025-05-03 13:00 IST

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರಕಾರಿ ನೌಕರರ ನೇಮಕಾತಿಗೆ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಾಗಿದ್ದು, ಇದೀಗ ಈ ಸಂಸ್ಥೆ ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇಂದು(ಮೇ 3) ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ನಡೆಯುತ್ತಿದೆ. ಆದರೆ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಹಾಲ್​ ಟಿಕೆಟ್​​ ಸಿಕ್ಕಿಲ್ಲ ಎನ್ನಲಾಗಿದೆ.

ಇಂದು (ಮೇ 3) ನಡೆಯಲಿರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಅಭ್ಯರ್ಥಿಗಳಿಗೆ ಹೈಕೋರ್ಟ್ ಅನುಮತಿ ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಇದೇ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಭಾಷಾಂತರದ ಗೊಂದಲದಿಂದಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದವರ ನೆರವಿಗೆ ಬಂದಿದ್ದ ಹೈಕೋರ್ಟ್ ಸುಮಾರು 120 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು.

ಈ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ, ಈ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ, ಮೇ 2ರಂದೇ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡುವುದಾಗಿ ಇತ್ತೀಚೆಗೆ ತಿಳಿಸಿತ್ತು.

ಇದರಂತೆ ಮೇ 2ರಂದು ಮಧ್ಯಾಹ್ನ 3 ಗಂಟೆಯೊಳಗೆ ಶುಲ್ಕ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಅಭ್ಯರ್ಥಿಗಳಿಗೆ ತಿಳಿಸಿತ್ತು. ಹೀಗೆ ಅರ್ಜಿ ಸಲ್ಲಿಸಿದವರಿಗೆ ಕೆಪಿಎಸ್‌ಸಿ ಕಚೇರಿಯಲ್ಲೇ ಸಂಜೆ 5.30ರವರೆಗೆ ಹಾಲ್ ಟಿಕೆಟ್ ನೀಡುವುದಾಗಿ ಮಾಹಿತಿ ನೀಡಲಾಗಿತ್ತು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಸ್ತೂ‌ರ್ ಬಾ ನಗರದಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮರುದಿನ 8 ಗಂಟೆಗೆ ಹೋಗಿ ಹಾಲ್ ಟಿಕೆಟ್ ಪಡೆದುಕೊಂಡು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿತ್ತು.

ಆದರೆ, ಮೇ 2ರಂದು ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿಗಳನ್ನು ಸ್ವೀಕರಿಸಬೇಕಿದ್ದ ಕೆಪಿಎಸ್‌ಸಿ ಮಧ್ಯರಾತ್ರಿಯಾದರೂ ಅರ್ಜಿಗಳನ್ನು ಸ್ವೀಕರಿಸುತ್ತಲೇ ಇತ್ತು ಎಂಬ ಆರೋಪ ಕೇಳಿ ಬಂದಿದೆ. ರಾತ್ರಿ ವೇಳೆಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ್ದ ಕೆಪಿಎಸ್‌ಸಿ, ರಾತ್ರಿ 12ರವರೆಗೆ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಸಲ್ಲಿಸುವವರು ಅರ್ಜಿ ಸಲ್ಲಿಸಿದ ಕೂಡಲೇ ಹಾಲ್ ಟಿಕೆಟ್ ಪಡೆದು ಮರುದಿನ ಬೆಂಗಳೂರಿನ ಕಸ್ತೂರ್ ಬಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಇದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News