ಕೆಪಿಎಸ್ ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್. ಸಾಹುಕಾರ್ ಅಮಾನತು
ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಆರೋಪದ ಬಗ್ಗೆ ತನಿಖೆಗೆ ರಾಜ್ಯಪಾಲ ಆದೇಶ
ಬೆಂಗಳೂರು: ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗಪಡಿಸಿ ತನ್ನ ಪುತ್ರಿ ಸರಕಾರಿ ಹುದ್ದೆಗೆ ಆಯ್ಕೆಯಾಗಲು ಅನುಕೂಲ ಮಾಡಿಕೊಟ್ಟ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಕೆಪಿಎಸ್ ಸಿ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಆದೇಶ ಹೊರಡಿಸಿದ್ದಾರೆ.
ಮುಂದಿನ ಆದೇಶದವರೆಗೆ ಹಿರಿಯ ಸದಸ್ಯರು ಕೆಪಿಎಸ್ ಸಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ.
ಶಿವಶಂಕರಪ್ಪ ಎಸ್. ಸಾಹುಕಾರ್ ತನ್ನ ಪುತ್ರಿಯೊಬ್ಬಳಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿಗೆ ಆಯ್ಕೆಯಾಗಲು ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ತಿರುಚಿದ ಮತ್ತು ಕಡಿಮೆ ಆದಾಯ ನಮೂದಿಸಿ ಸಹಕರಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಶಿವಶಂಕರಪ್ಪ ಎಸ್. ಸಾಹುಕರ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಅಗತ್ಯ ತನಿಖೆಗಾಗಿ ಭಾರತದ ಸಂವಿಧಾನದ 317(1) ನೇ ವಿಧಿಯ ಅಡಿಯಲ್ಲಿ ಭಾರತದ ಸುಪ್ರೀಂ ಕೋರ್ಟ್ ಗೆ ಉಲ್ಲೇಖಿಸಲು ರಾಜ್ಯಪಾಲರು ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ರಾಷ್ಟ್ರಪತಿಯಿಂದ ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರರನ್ನು ಕೆಪಿಎಸ್ ಸಿ ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.