ಭ್ರಷ್ಟಾಚಾರದ ಆರೋಪ ಆಧಾರರಹಿತ : ಕೆಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಸ್ಪಷ್ಟನೆ
‘ಕೆಎಸ್‍ಡಿಎಲ್ ಟೆಂಡರ್ ಸಂಪೂರ್ಣ ಪಾರದರ್ಶಕ’
ಬೆಂಗಳೂರು : ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ(ಕೆಎಸ್‍ಡಿಎಲ್) ಸಂಸ್ಥೆಯು ಕಪ್ಪುಪಟ್ಟಿಯಲ್ಲಿ ಇರುವ ಕರ್ನಾಟಕ ಅರೋಮಾಸ್ ಎನ್ನುವ ಸಂಸ್ಥೆಗೆ ಕಚ್ಚಾ ಸಾಮಗ್ರಿ ಖರೀದಿ ಟೆಂಡರ್ ನೀಡುವ ಮೂಲಕ ಅವ್ಯವಹಾರ ಎಸಗಿದೆ ಎಂಬ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಮಾಡಿರುವ ಆರೋಪ ನಿರಾಧಾರ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಎಂ.ಪ್ರಶಾಂತ್ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕಚ್ಚಾ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಗೆ ಈ ವರ್ಷದ ಎ.25, ಮೇ 25, ಸೆ.26ರಂದು ಮತ್ತು ಸರಕಾರಕ್ಕೆ ನ.27ರಂದು 1,500 ಪುಟಗಳಷ್ಟು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಅರೋಮಾಸ್ ಸಂಸ್ಥೆಯು ಲೋಕಾಯುಕ್ತ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ಸಾಬೀತಾಗಿದೆ. ಈ ಸಂಬಂಧದ ದೂರನ್ನು ಅದು ವಜಾಗೊಳಿಸಿದೆ. ಹೀಗಾಗಿ ಈ ಸಂಸ್ಥೆಯು ಕಪ್ಪುಪಟ್ಟಿಯಲ್ಲೇನೂ ಇಲ್ಲ. ಕೆಟಿಟಿಪಿ ನಿಯಮಾವಳಿಗಳ ಪ್ರಕಾರ ಪಾರದರ್ಶಕವಾಗಿ ಈ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಗಂಧದ ಎಣ್ಣೆ ಖರೀದಿಯಲ್ಲಿ ‘ಎಲೆಕ್ಟ್ರಾನಿಕ್ ರಿವರ್ಸ್ ಹರಾಜು' ಪ್ರಕ್ರಿಯೆಗೆ ಅವಕಾಶವಿದೆ. ಇದರಿಂದಾಗಿ ಕೆಎಸ್ಡಿಎಲ್ ಸಂಸ್ಥೆಗೆ 88 ಕೋಟಿ ರೂಪಾಯಿ ಉಳಿತಾಯವಾಗಿದೆ. ಏತನ್ಮಧ್ಯೆ ಕೆಲವು ಬಿಡ್ ದಾರರು ದುರುದ್ದೇಶದಿಂದ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲೂ ಸಹ ಅ.9ರಂದು ಸಂಸ್ಥೆಯ ಪರವಾಗಿಯೇ ಆದೇಶ ಬಂದಿದೆ ಎಂದು ಅವರು ನುಡಿದಿದ್ದಾರೆ.
ಆಧಾರ ರಹಿತ ಆರೋಪದಿಂದ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಈ ಆರೋಪಗಳನ್ನು ಸಂಸ್ಥೆಯು ಸಾರಾಸಗಟಾಗಿ ನಿರಾಕರಿಸುತ್ತದೆ ಎಂದು ಪ್ರಶಾಂತ್ ವಿವರಣೆ ನೀಡಿದ್ದಾರೆ.