×
Ad

ಫೆ.4ಕ್ಕೆ ವಿಜಯಪುರದಲ್ಲಿ 'ಕ್ರಾಂತಿವೀರ ಬ್ರಿಗೇಡ್' ಗೆ ಚಾಲನೆ: ಕೆ.ಎಸ್. ಈಶ್ವರಪ್ಪ

Update: 2025-02-03 21:50 IST

ವಿಜಯಪುರ : ಉತ್ತರ ಕರ್ನಾಟಕದಲ್ಲಿ ‘ಕ್ರಾಂತಿವೀರ ಬ್ರಿಗೇಡ್’ಗೆ ವ್ಯಾಪಕ ಬೆಂಬಲ ದೊರಕುತ್ತಿದ್ದು, 1008 ಸ್ವಾಮೀಜಿಗಳ ಪಾದಪೂಜೆ ಮೂಲಕ ಬಸವಣ್ಣನ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ನಾಳೆ (ಫೆ.) ‘ಕ್ರಾಂತಿವೀರ ಬ್ರಿಗೇಡ್’ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ‘ಕ್ರಾಂತಿವೀರ ಬ್ರಿಗೇಡ್’ನ ಸಂಚಾಲಕರೂ ಆಗಿರುವ ಈಶ್ವರಪ್ಪ, ಹಿಂದೂ ಸಮಾಜದ ರಕ್ಷಣೆಯ ದೃಷ್ಟಿಯಿಂದ ಈ ಬ್ರಿಗೇಡ್ ಸೃಜಿಸಲಾಗಿದೆ. ಇದು ರಾಜಕೀಯ ರಹಿತ ಸಂಘಟನೆ ಕೇಂದ್ರಿತ ಬ್ರಿಗೇಡ್ ಆಗಿದ್ದು, ಯಾವುದೇ ರಾಜಕೀಯದ ನಾಯಕರು ಬಂದರೂ ಸ್ವಾಗತ ಮಾಡುತ್ತೇವೆ. ಬ್ರಿಗೇಡ್‍ಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಣೆ ನೀಡಿದರು.

2024ರ ಫೆ.22ರಂದು ಬ್ರಿಗೇಡ್ ಬಗ್ಗೆ ಸಭೆ ಆಗಿತ್ತು. ಐದು ತಿಂಗಳಲ್ಲಿ ನಿರೀಕ್ಷೆ ಮೀರಿ ಉತ್ತರ ಕರ್ನಾಟಕದಲ್ಲಿ ಬೆಂಬಲ ಸಿಗುತ್ತಿದೆ. ಆರಂಭದಲ್ಲಿ 1008 ಸ್ವಾಮಿಗಳು ಪಾದಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆಯಾಗಲಿದ್ದು, ಕನ್ನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠ ತಿಂಥಣಿ ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಸೇರಿದಂತೆ ಹರ-ಗುರು-ಚರ ಮೂರ್ತಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 1ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಎಲ್ಲ ಗುರು ಪೀಠಗಳ ಸ್ವಾಮೀಜಿಗಳು ತಾವೇ ಸ್ವಯಂಪ್ರೇರಿತವಾಗಿ ಬರುತ್ತೇವೆಂದು ಹೇಳಿದ್ದಾರೆ. ಅನೇಕ ಸ್ವಾಮೀಜಿಗಳು ಇಂದಿಗೂ ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಸಮಾಜಕ್ಕೆ ಆಧ್ಯಾತ್ಮ ಹಾಗೂ ಜ್ಞಾನ ಬಲ ತುಂಬುವ ಈ ಮಠಾಧೀಶರ ಮೇಲೆ ಜನರಿಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಅನೇಕ ಅರ್ಚಕರಲ್ಲಿ ಭಕ್ತಿ ತುಂಬಿ ತುಳುಕುತ್ತದೆ, ಆದರೆ ತರಬೇತಿ ಕೊರತೆ ಇದೆ, ಹೀಗಾಗಿ ತರಬೇತಿ ನೀಡುವ ಉದ್ದೇಶವನ್ನೂ ಬ್ರಿಗೇಡ್ ಹೊಂದಿದೆ. ಈ ಎಲ್ಲರ ನೋವಿಗೆ ಸ್ಪಂದಿಸುವುದೇ ಬ್ರಿಗೇಡ್ ಗುರಿಯಾಗಿದೆ ಎಂದರು.

ರಾಜಕಾರಣ ಗಬ್ಬೆದ್ದು ಹೋಗಿದೆ: ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದು ಹೋಗಿದೆ. ರಾಜಕೀಯ ಕಾರ್ಯಕರ್ತರು ನಾಚಿಕೆ ಪಡುವಂತೆ ಆಗಿದೆ. ರಾಷ್ಟ್ರೀಯ ನಾಯಕರು ಇದ್ದರೋ, ಇಲ್ಲವೋ ಇಲ್ಲ ಗೊತ್ತಾಗುತ್ತಿಲ್ಲ. ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಹೊಂದಾಣಿಕೆ ರಾಜಕೀಯವು ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

‘ಕಾಂಗ್ರೆಸ್‍ನಲ್ಲಿ ಎಲ್ಲರೂ ನಾನು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಬಾಯಿ ಮುಚ್ಚಿಕೊಂಡು ಇರುವಂತೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರೂ ಬೆಲೆ ಕೊಡುತ್ತಿಲ್ಲ. ಖರ್ಗೆ ಸಾಹೇಬರು ಮುತ್ಸದ್ಧಿ ರಾಜಕಾರಣಿ, ಅವರ ಬಗ್ಗೆ ನನಗೆ ಗೌರವವಿದೆ, ಆದರೆ ಕುಂಭಮೇಳಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ಖಂಡನೀಯ ಎಂದರು.

ಹಿಂದೂ ಸಮಾಜದ ಬಗ್ಗೆ ಖರ್ಗೆ ಬಾಯಿಮುಚ್ಚಿಕೊಂಡು ಇರಬೇಕು. ಸಮಾಜವನ್ನು ಕೆಣಕಬೇಡಿ. ಕುಂಭಮೇಳ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕುಂಭಮೇಳದಲ್ಲಿ ಭಾಗಿಯಾದ ಯು.ಟಿ.ಖಾದರ್ ಅವರ ನಡೆಯನ್ನು ಖಂಡಿಸುತ್ತೀರಾ? ಕಾಂಗ್ರೆಸ್‍ನಿಂದ ಯಾರೂ ಭಾಗಿಯಾಗಬೇಡಿ ಎಂದು ಹೇಳಲು ಸಾಧ್ಯವೇ? ಎಂದು ಈಶ್ವರಪ್ಪ ಪ್ರಶ್ನಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News