×
Ad

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1.4 ಕೋಟಿ ಪ್ರಕರಣ ಇತ್ಯರ್ಥ

Update: 2025-12-17 00:36 IST

ಬೆಂಗಳೂರು : ಶನಿವಾರಂದು(ಡಿ.13) ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಒಟ್ಟು 1.4 ಕೋಟಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಪೀಠಗಳಲ್ಲಿ 1,107 ಪ್ರಕರಣಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಯಲಗಳಲ್ಲಿ 1,04,65,130 ಪ್ರಕರಣಗಳು ಸೇರಿ ಒಟ್ಟು 1,04,66,237 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

2019ರಿಂದ 2025ರ ವರೆಗೆ 4,44,27,865 ಸಂಚಾರ ಚಲನ್ ಪ್ರಕರಣಗಳು ಬಾಕಿ ಇದ್ದು, 2695 ಕೋಟಿ ರೂ. ದಂಡ ವಿಧಿಸಲಾಗಿದೆ. 4,32,339 ಪ್ರಕರಣಗಳು ಸಾರಿಗೆ ಇಲಾಖೆಯ ಮುಂದೆ ಬಾಕಿ ಉಳಿದಿವೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕೋರಿಕೆಯ ಮೇರೆಗೆ ರಾಜ್ಯ ಸರಕಾರವು ಶೇ.50ರಷ್ಟು ರಿಯಾಯಿತಿ ನೀಡಿರುವುದರಿಂದ ರಾಜ್ಯಾದ್ಯಂತ ಒಟ್ಟು 24,29,461 ಸಂಚಾರ ಚಲನ್ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದೆ. ಅದರಿಂದ 56 ಕೋಟಿ ರೂ.ಗಳಿಗೂ ಹೆಚ್ಚಿನ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆಗೆ ಸಂಬಂಧಿಸಿದ ಒಟ್ಟು 902 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 29,66,564 ರೂ. ದಂಡದ ಮೊತ್ತವನ್ನು ವಿಧಿಸಲಾಗಿದೆ. ಈ ಬಾರಿಯ ಲೋಕ್ ಅದಾಲತ್‍ನಲ್ಲಿ 5 ವರ್ಷಕ್ಕಿಂತ ಹಳೆಯ 2,268 ಪ್ರಕರಣಗಳು, 10ವರ್ಷಕ್ಕಿಂತ ಹೆಚ್ಚು ಹಳೆಯ 56 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 2,144 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಉಪಕಾರ್ಯದರ್ಶಿ ಶ್ರೀಧರ ಎಂ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಂ.ಬಾಲಸುಬ್ರಹ್ಮಣಿ ಮತ್ತಿತರರು ಉಪಸ್ಥಿತರಿದ್ದರು.

2026ರ ಮಾ.14ಕ್ಕೆ ರಾಷ್ಟ್ರೀಯ ಲೋಕ್ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ 2026ರ ಮಾ.14ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಎಲ್ಲ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಜ.1ರಿಂದ ಜ.31ರ ವರೆಗೆ ರಸ್ತೆ ಸುರಕ್ಷತೆಯ ಕುರಿತು ವಿಶೇಷ ಅಭಿಯಾನ ನಿಗದಿಪಡಿಸಲಾಗಿದೆ. ಡಿ.4ರಿಂದ 2026ರ ಮಾ.8ರವರೆಗೆ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು ನಿಗದಿಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News