ಲೋಕಸಭಾ ಚುನಾವಣೆ | ಓಟು ಹಾಕಿದವರಿಗೆ ಹೋಟೆಲ್‍ಗಳಲ್ಲಿ ಉಚಿತ ಬೆಣ್ಣೆದೋಸೆ, ಪಾನಕ, ಕಾಫಿ ವಿತರಣೆ

Update: 2024-04-26 17:19 GMT

ಬೆಂಗಳೂರು : ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ನಗರದ ಕೆಲವು ಹೋಟೆಲ್‍ಗಳಲ್ಲಿ ಮತದಾನ ಮಾಡಿ ತಮ್ಮ ಬೆರಳಿನ ಶಾಹಿ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಫಿಲ್ಟರ್ ಕಾಫಿ, ಪಾನಕ, ಮಜ್ಜಿಗೆ, ಉಪಹಾರವನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ.

ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‍ನಲ್ಲಿ ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕ, ಮಜ್ಜಿಗೆಯನ್ನು ಉಚಿತವಾಗಿ ನೀಡಲಾಯಿತು.

ಈ ಬಗ್ಗೆ ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲಕ ಎಸ್.ಪಿ.ಕೃಷ್ಣರಾಜ್ ಮಾತನಾಡಿ, 2013ರ ವಿಧಾನಸಭಾ ಚುನಾವಣೆಯಿಂದಲೂ ಮತ ಚಲಾಯಿಸಿದವರಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ಪ್ರಜಾಪ್ರಭುತ್ವ ಹಬ್ಬ ಆಚರಿಸುತ್ತಿರುವುದಾಗಿ ತಿಳಿಸಿದರು.

ನಗರದ ಲುಲು ಹಾಗೂ ಒರಾಯನ್ ಮಾಲ್‍ನಲ್ಲಿ ಕಾಮತ್ ಹೊಸರುಚಿ ಮತ್ತು ಅಯ್ಯಂಗಾರ್ ಓವನ್ ಫ್ರೆಶ್‍ನಂತಹ ಆಹಾರ ಮಳಿಗೆಗಳು ಮತ್ತು ಬೇಕರಿಗಳು ಮತ ಚಲಾಯಿಸಿದವರಿಗೆ ಶೇ.10ರಷ್ಟು ರಿಯಾಯಿತಿ ನೀಡಿದ್ದವು. ಕೆಫೆ, ಉಡುಪಿ ರುಚಿ, ಮಾಲ್ಗುಡಿ, ಮೈಲಾರಿ ಮನೆ ಸೇರಿದಂತೆ ಹಲವು ಹೋಟೆಲ್‍ಗಳಲ್ಲಿ ಉಚಿತವಾಗಿ ದೋಸೆ ಮತ್ತು ಫಿಲ್ಟರ್ ಕಾಫಿ, ಟೀ ನೀಡುವ ಮೂಲಕ ಮತದಾನಕ್ಕೆ ಪೋತ್ಸಾಹ ನೀಡಿದವು.

ಈ ಕುರಿತು ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಮತದಾನ ಪ್ರಮಾಣ ಹೆಚ್ಚಳ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಈ ಹಿಂದೆ ಶೇ.54ರಷ್ಟು ಮತದಾನವಾಗಿತ್ತು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿರುಬಿಸಿಲಿನ ನಡುವೆಯೂ ಹೆಚ್ಚಿನ ಪ್ರಮಾಣದ ಮತದಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸೋಯೇಷನ್ ಅಡಿಯಲ್ಲಿನ ಅನೇಕ ಹೋಟೆಲ್‍ಗಳು ಪೂರಕ ಪಾನೀಯಗಳು, ಸಿಹಿತಿಂಡಿಗಳನ್ನು ನೀಡುತ್ತಿವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News