ಲೋಕಸಭಾ ಚುನಾವಣೆ | ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ನೀರಸ ಮತದಾನ

Update: 2024-04-26 15:45 GMT

ಬೆಂಗಳೂರು: ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ನೀರಸ ಮತದಾನ ನಡೆದಿದ್ದು, ಮೂರು ಕ್ಷೇತ್ರದಲ್ಲಿ ಸರಾಸರಿ ಶೇಕಡವಾರು 50ರಷ್ಟು ಮತದಾನವಷ್ಟೇ ಆಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ.50.04, ಬೆಂಗಳೂರು ದಕ್ಷಿಣದಲ್ಲಿ ಶೇ.49.37, ಬೆಂಗಳೂರು ಕೇಂದ್ರದಲ್ಲಿ ಶೇ.48.61ರಷ್ಟು ಮತದಾನ ನಡೆದಿದೆ. ಬೆಂಗಳೂರಿನಲ್ಲಿ ಮತದಾನವನ್ನು ಹೆಚ್ಚಸಲು ಬಿಬಿಎಂಪಿ ಮತ್ತು ಚುನಾವಣಾ ಆಯೋಗವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ನಡೆದಿಲ್ಲ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಸಹಭಾಗಿತ್ವದೊಂದಿಗೆ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಸಂವಾದ, ಜಾಥಾ, ಮ್ಯಾರಾಥಾನ್‍ಗಳನ್ನು ಆಯೋಜಿಸಲಾಗಿತ್ತು. ಟ್ಯಾಕ್ಸಿ ಸೇರಿದಂತೆ ಸಾರಿಗೆ ಸಂಘ-ಸಂಸ್ಥೆಗಳಿಗಳಿಗೆ ಮಧ್ಯಾಹ್ನದ ವರೆಗೆ ಪ್ರವಾಸಕ್ಕೆ ಜನರನ್ನು ಕರೆದುಕೊಂಡು ಹೋಗಬಾರದು ಎಂದು ತಿಳಿಸಿತ್ತು. ಆದರೂ ಬೆಂಗಳೂರಿನ ಜನರು ಮತದಾನವನ್ನು ಚಲಾಯಿಸಲು ಮುಂದೆ ಬಂದಿಲ್ಲ.

ಚುನಾವಣೆ ಹಿನ್ನೆಲೆ ಬಿಎಂಟಿಸಿ ಬಸ್‍ಗಳು ಕಡಿಮೆ ಪ್ರಮಾಣದಲ್ಲಿ ಸಂಚರಿಸಿದವು. ಇದರಿಂದ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ, ನೂಕುನುಗ್ಗಲು ಸಂಭವಿಸಿತ್ತು. ಬಸ್‍ಗಳು ಬಾರದ ಕಾರಣ ಪ್ರಯಾಣಿಕರು ಬಸ್ ಸ್ಟಾಂಡ್‍ಗಳಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ದೃಷ್ಯಗಳು ಕಂಡು ಬಂದವು.

ಸ್ಟ್ರಾಂಗ್ ರೂಂಗಳ ವಿವರ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಎಸ್‍ಎಸ್‍ಎಂಆರ್‍ವಿ ಕಾಲೇಜು, 9ನೆ ಬ್ಲಾಕ್, ಜಯನಗರ ಮತಯಂತ್ರಗಳನ್ನು ಇರಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News