×
Ad

ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಲೋಕಾಯುಕ್ತ ವಶಕ್ಕೆ

Update: 2025-04-25 17:09 IST

ಬೆಂಗಳೂರು : 20 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್. ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಗುರುವಾರ ಸಂಜೆ ನಾಗರಭಾವಿ ಬಳಿ ವಾಣಿಜ್ಯ ತೆರಿಗೆ ಪರಿವೀಕ್ಷಕ ನಿಜಾನಂದಮೂರ್ತಿ ಎಂ.ಆರ್, ಮನೋಜ್ ಎಂ. ಎಂಬವರಿಂದ 20 ಲಕ್ಷ ರೂ. ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಸರಕು ಸಾಗಾಣಿಕೆ ಕಂಪೆನಿಗಳ ಮಾಲಕರಿಂದ ಪ್ರತೀ ತಿಂಗಳು ಲಂಚ ಪಡೆದು, ದಿಲ್ಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ಪಾನ್‌ ಮಸಾಲವನ್ನು ಸಾಗಾಣಿಕೆ ಮಾಡುತ್ತಿರುವ ಪಾನ್ ಮಸಾಲ ಸರಕು ಸಾಗಾಣಿಕೆದಾರರಿಗೆ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಲು ಅನುವು ಮಾಡಿಕೊಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರ್‌ರವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ವೆಂಕಟೇಶ ಟಿ.ಸಿ., ಗಿರೀಶ ಪಾಂಡು ರೋಡಕರ್, ಮತ್ತು ಇನ್‌ಸ್ಪೆಕ್ಟ‌ರ್ ಹಾಲಪ್ಪ ವೈ.ಬಾಲದಂಡಿ, ಪೊಲೀಸ್ ನಿರೀಕ್ಷಕ ಚಂದ್ರಕಾಂತ ಎಲ್.ಟಿ ಕಾರ್ಯಾಚರಣೆ ನಡೆಸಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News