ಮೈಸೂರು : ಎಸ್‌ಐಆರ್‌ನ ಫಾರಂ -7 ನೀಡಿ ಎನ್‌ಆರ್ ಕ್ಷೇತ್ರದಲ್ಲಿಯೇ 540 ಮತಗಳ ಡಿಲೀಟ್ ಮಾಡಲು ಅರ್ಜಿ ನೀಡಿದ್ದ ಏಳು ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಕಾರಣರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಸಚಿವ ಕುಮಾರಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಅವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ, ವಾರ್ಡ್ ಸಂಖ್ಯೆ 29 ರಲ್ಲಿ ನಾಲ್ಕು ಬಾರಿ ಪಾಲಿಕೆ ಸದಸ್ಯರಾಗಿದ್ದ ಸೈಯದ್ ಹಸರತ್ ಅವರು ಇಲ್ಲಿ ಇಲ್ಲವೆಂದು ಫಾರಂ7 ಅನ್ನು ಬಿಜೆಪಿ ಬಿಎಲ್‌ಎ-2 ನೀಡಿದ್ದಾರೆ. ಇದೊಂದು ಉದಾಹರಣೆ. ಶಿವಕುಮಾರ್ ಎಂಬಾತ ಸಹ 48 ಮುಸ್ಲಿಮರು ಇಲ್ಲಿ ವಾಸವಾಗಿಲ್ಲ ಎಂದು ಫಾರಂ 7 ನೀಡಿದ್ದಾರೆ. ಇದನ್ನು ನೋಡಿದರೆ ವ್ಯವಸ್ಥಿತವಾಗಿ ರಾಜ್ಯ ಮಟ್ಟದ ಬಿಜೆಪಿ ನಾಯಕರಿಂದಲೇ ಮಾಡಿರುವ ಹುನ್ನಾರವಾಗಿದೆ. ಮೈಸೂರಲ್ಲಿ ಏಳು ಎಫ್‌ಐಆರ್ ದಾಖಲಾಗಿದೆ. ಆದರೆ ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.

ಫಾರಂ 7 ಸ್ಥಳಾಂತರ, ಸತ್ತವರು ಹಾಗೂ ಇತರ ಕಾರಣಕ್ಕಾಗಿ ಆಯಾಯ ಮತಗಟ್ಟೆಯ ವಾಸಿಗಳು ನೀಡಬೇಕು. ಇಲ್ಲಿ ಯಾವುದೋ ವಾರ್ಡಿನ ನಿವಾಸಿ ಮತ್ತೊಂದು ವಾರ್ಡ್‌ನ ಮುಸ್ಲಿಮರ ಹೆಸರನ್ನು ಡಿಲೀಟ್ ಮಾಡಲು ಫಾರಂ ಕಂಡುಬಂದಿದೆ. ಇದಕ್ಕಾಗಿ ಬಿಜೆಪಿ ನಾಯಕರು ಮತ್ತು ಸಚಿವ ಕುಮಾರಸ್ವಾಮಿ ಮೇಲೆ ದೂರು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಕೇವಲ ಮುಸ್ಲಿಮರು ಮಾತ್ರವಲ್ಲದೆ ದಲಿತರು, ಪರಿಶಿಷ್ಟ ಪಂಗಡ ಮತಗಳನ್ನು ಸಹ ಡಿಲೀಟ್ ಮಾಡಲಾಗಿದೆ. ಕೂಡಲೇ ಎಸ್‌ಐಆರ್ ರದ್ದುಗೊಳಿಸಿ ಎಂದು ಆಗ್ರಹಿಸಿದರು.

 ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸಣ್ಣ, ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಮಹೇಶ್, ವಸ್ತುಪ್ರದರ್ಶನ ಪ್ರಾಕಾರದ ಅಧ್ಯಕ್ಷ ಅಯೂಬ್‌ಖಾನ್, ಗಿರೀಶ್, ಸೈಯದ್ ಹಸರತ್. ಶಿವಣ್ಣ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor