ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರಿನ ಒಝೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಎಸ್.ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.) ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) 2002ರ ಸೆಕ್ಷನ್ 19ರಡಿಯಲ್ಲಿ ಸೆಪ್ಟೆಂಬರ್ 30ರಂದು ವಾಸುದೇವನ್ ಅವರನ್ನು ಬಂಧಿಸಲಾಗಿದ್ದು, ತನಿಖೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ. ಈ ವಂಚನೆ ಕುರಿತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಎಫ್‍ಐಆರ್‍ಗಳು ದಾಖಲಾಗಿದ್ದವು. ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ಸಹ ತನಿಖೆ ಆರಂಭಿಸಿತ್ತು ಎಂದು ಈ.ಡಿ. ಮಾಧ್ಯಮ ಪ್ರಕಟನೆ ಹೊರಡಿಸಿದೆ.

ಈ.ಡಿ. ಅಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಾಸುದೇವನ್ ಅವರನ್ನು ಬಂಧಿಸಲಾಗಿದ್ದು, ಅಪರಾಧದ ಮೂಲಕ ಗಳಿಸಿದ ಹಣದ ದುರ್ಬಳಕೆ, ಅಕ್ರಮ ವರ್ಗಾವಣೆ ಹಾಗೂ ಈ ಜಾಲದಲ್ಲಿದ್ದ ಇತರ ಕಂಪೆನಿಗಳು ಮತ್ತು ವ್ಯಕ್ತಿಗಳ ಪಾತ್ರದ ಕುರಿತು ತನಿಖೆ ಮುಂದುವರೆದಿದೆ ಎಂದು ಈ.ಡಿ ಪ್ರಕಟನೆಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಒಝೋನ್ ಅರ್ಬಾನಾ ಸಂಸ್ಥೆಯು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಟೌನ್‍ಶಿಪ್ ನಿರ್ಮಿಸುವ ಭರವಸೆ ನೀಡಿ, ನಿಗದಿತ ಸಮಯಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸದೆ ಹಾಗೂ ಮನೆ ಗ್ರಾಹಕರಿಗೆ ನಿವೇಶನಗಳನ್ನು ಹಸ್ತಾಂತರಿಸದೆ ದ್ರೋಹ ಎಸಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ನಿವೇಶನ ಹಸ್ತಾಂತರ ಮಾಡುವವರೆಗೆ ಪ್ರಿ-ಕನ್‍ಸ್ಟ್ರಕ್ಷನ್ ಇಎಂಐ ಪಾವತಿಸುವುದಾಗಿ ಅಮಾಯಕರನ್ನು ನಂಬಿಸಿದ್ದ ಸಂಸ್ಥೆಯು, ಅವರಿಂದ ಹಣ ಹೂಡಿಕೆ ಮಾಡಿಸಿತ್ತು. ಆದರೆ ನಂತರ ಯೋಜನೆಯನ್ನು ಪೂರ್ಣಗೊಳಿಸದೆ, ನಿವೇಶನ ಕೂಡ ಹಸ್ತಾಂತರ ಮಾಡದೆ, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು ಎಂದು ಈ.ಡಿ. ಹೇಳಿದೆ.

ಕೋಟ್ಯಂತರ ರೂ.ಮೌಲ್ಯದ ಸ್ಥಿರಾಸ್ತಿ ತಾತ್ಕಾಲಿಕ ಜಪ್ತಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ.ಡಿ. ಅಧಿಕಾರಿಗಳು ಆಗಸ್ಟ್‌ ನಲ್ಲಿ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ್ದರು. ನಂತರ ನಡೆಸಿದ ತನಿಖೆಯಿಂದ, ಒಝೋನ್ ಅರ್ಬಾನಾ ಸಂಸ್ಥೆ ಹಾಗೂ ಮುಖ್ಯಸ್ಥ ವಾಸುದೇವನ್ ಅವರು ಗ್ರಾಹಕರಿಗೆ ಒಟ್ಟು 927.22 ಕೋಟಿ ರೂಪಾಯಿಗಳಷ್ಟು ಬೃಹತ್ ವಂಚನೆ ಎಸಗಿರುವುದು ಸಾಬೀತಾಗಿತ್ತು. ಮನೆ ನಿರ್ಮಾಣಕ್ಕೆ ಬಳಸಬೇಕಿದ್ದ ಹಣವನ್ನು ಇತರೆ ಯೋಜನೆಗಳಿಗೆ ಹಾಗೂ ವೈಯಕ್ತಿಕ ಕಾರ್ಯಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ.ಡಿ. ಅಧಿಕಾರಿಗಳು ಅಕ್ಟೋಬರ್ 4ರಂದು ಸಂಸ್ಥೆಗೆ ಸೇರಿದ 423.378 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor