ಬೆಂಗಳೂರು : ಮುಂಬರುವ ಒಂದು ವರ್ಷದೊಳಗೆ ರಾಜ್ಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ್ದ 87 ಸ್ಥಳಗಳಲ್ಲಿ ಗಾಂಧಿ ಸ್ಮಾರಕ ಸ್ತಂಭ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಶುಕ್ರವಾರ ನಗರದ ಕುಮಾರಕೃಪಾದಲ್ಲಿರುವ ಗಾಂಧಿ ಭವನ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ಗಾಂಧಿ ಆಯೋಜಿಸಿದ್ದ ಗಾಂಧಿ ಸೇವಾ ಪ್ರಶಸ್ತಿ-2026 ಪ್ರದಾನ ಹಾಗೂ ಕೊಪ್ಪಳ ಜಿಲ್ಲೆಯ 11 ವ್ಯಸನಮುಕ್ತ ಗ್ರಾಮಗಳಿಗೆ ಗಾಂಧಿ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರ ವಿಚಾರಗಳು ಭಾರತ ದೇಶಕ್ಕೆ ಮಾತ್ರವಲ್ಲ, ಪ್ರಪಂಚ ಹಾಗೂ ಸಮಸ್ತ ಮನುಕುಲಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಘನತೆಗೆ ಹೋಲಿಕೆಯಾಗಬಲ್ಲ ಮತ್ತೊಂದು ವ್ಯಕ್ತಿತ್ವವಿಲ್ಲ. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ವಿಶ್ವದ ಎಲ್ಲ ನಾಯಕರು ಗಾಂಧೀಜಿಯನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ.ನಾವು ಈ ದೇಶದಲ್ಲಿ ಹುಟ್ಟಿ ಬದುಕುತ್ತಿರುವುದೇ ನಮ್ಮೆಲ್ಲರ ಭಾಗ್ಯ ಎಂದರು.

11 ಗ್ರಾಮಗಳಿಗೆ ಪುರಸ್ಕಾರ: ಸ್ವಯಂ ಪ್ರೇರಿತವಾಗಿ ತಮ್ಮ ಗ್ರಾಮಗಳನ್ನು ಮದ್ಯ ಮಾರಾಟ ಮುಕ್ತ ಮಾಡಿದ ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ಹಾಗೂ ಗಾಂಧೀಜಿ ಅವರ ಚಿಂತನೆಗಳನ್ನು ಹಳ್ಳಿಗಳಲ್ಲಿ ಬಿತ್ತುತ್ತಿರುವ ಕೊಪ್ಪಳದ ಗಾಂಧಿ ಬಳಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಾಂಧಿ ಪುರಸ್ಕಾರ ಪ್ರದಾನ ಮಾಡಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಮದ್ಯ ಮಾರಾಟ ಮುಕ್ತ ಗ್ರಾಮ ಗೌರವ ಪಡೆದ ಕೊಪ್ಪಳ ತಾಲೂಕಿನ ಹಟ್ಟಿ, ಇದೇ ತಾಲೂಕಿನ ಲೇಬಗೇರಿ, ತಾಳಕನಕಾಪುರ, ಹನುಮನಹಳ್ಳಿ, ಕಾಮನೂರು, ಕುಕನೂರು ತಾಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಕುಷ್ಟಗಿ ತಾಲೂಕಿನ ಮದ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಿಗೆ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor