×
Ad

ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ : ಮಧುಬಂಗಾರಪ್ಪ

Update: 2026-01-18 23:32 IST

ಬೆಂಗಳೂರು : ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕವು(ಕ್ಯಾಮ್ಸ್) ಆಯೋಜಿಸಿದ್ದ 'ವಿಷನ್ - ಮಿಷನ್' ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣವನ್ನು ಸರಳೀಕರಿಸುವಂತೆ ಶಿಕ್ಷಣ ಒಕ್ಕೂಟಗಳಿಂದ ಮನವಿಗಳು ಬಂದಿದ್ದು, ಅವುಗಳನ್ನು ಪರಿಶೀಲಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

'ಮೂರು ಪರೀಕ್ಷಾ ಪದ್ಧತಿ', ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ 'ವೆಬ್‍ಕಾಸ್ಟಿಂಗ್' ಅಳವಡಿಕೆ ಹಾಗೂ ಎಸೆಸಸೆಲ್ಸಿ ಹಾಗೂ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿರುವುದು ಸೇರಿದಂತೆ ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿವೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷರಾದ ಎನ್.ಪಿ.ಸಿಂಗ್ ಮತ್ತು ಕ್ಯಾಮ್ಸ್‍ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News