ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಎಂಎಸ್‍ಎಂಇ ಬೆನ್ನೆಲುಬು : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : 2032ರ ವೇಳೆಗೆ ರಾಜ್ಯವು 1 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಯಬೇಕು. ಇದು ಸಾಧ್ಯವಾಗಬೇಕೆಂದರೆ, ಎಂಎಸ್‍ಎಂಇ ವಲಯ ಶಕ್ತವಾಗಿರಬೇಕು. ಇದಕ್ಕಾಗಿ ಸಾಲ ಸೌಲಭ್ಯ, ಕೌಶಲ್ಯಪೂರ್ಣ ಉದ್ಯೋಗಿಗಳು ಮತ್ತು ಟೆಸ್ಟಿಂಗ್ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಕಾಸಿಯಾ, ಎಫ್.ಕೆ.ಸಿ.ಸಿ.ಐ ಮತ್ತು ಪೀಣ್ಯ ಕೈಗಾರಿಕೆಗಳ ಒಕ್ಕೂಟ ಸಂಯುಕ್ತವಾಗಿ ಏರ್ಪಡಿಸಿದ್ದ ʼಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಾವೇಶ-2025’ರಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು `ಎಂಎಸ್‍ಎಂಇ ಕನೆಕ್ಟ್’ ಮತ್ತು `ವೆಂಚುರೈಸ್’ ತರಹದ ರಚನಾತ್ಮಕ ಉಪಕ್ರಮಗಳನ್ನು ಕೈಗೊಂಡಿದೆ. ತಯಾರಿಕೆ ವಲಯದಲ್ಲಿ ಶೇ.12ರಷ್ಟು ಬೆಳವಣಿಗೆ ಸಾಧಿಸುವ ಮೂಲಕ 2029ರ ಹೊತ್ತಿಗೆ 20 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಜತೆಗೆ 2 ಮತ್ತು 3ನೆ ಹಂತದ ನಗರಗಳಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ರಾಜ್ಯದಲ್ಲಿ 38 ಲಕ್ಷ ಎಂಎಸ್‍ಎಂಇ ಉದ್ಯಮಗಳಿದ್ದು, ಇವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜತೆಗೆ ಸಾವಿರಾರು ಕೋಟಿ ರೂ. ವಹಿವಾಟು ನಡೆಸುತ್ತಿವೆ. ಭಾರತದ ಜಿಡಿಪಿ ಬೆಳವಣಿಗೆಗೆ ಎಂಎಸ್‍ಎಂಇ ವಲಯವು ಶೇ.30ರಷ್ಟು ಕೊಡುಗೆ ನೀಡುತ್ತಿದ್ದು, 15 ಕೋಟಿ ಜನರಿಗೆ ಬದುಕು ನೀಡಿವೆ. ಅದರಲ್ಲೂ ಮಹಿಳೆಯರು ಮತ್ತು ಎಸ್ಸಿ-ಎಸ್ಟಿ ಸಮುದಾಯಗಳಿಂದ ಬಂದ ಉದ್ಯಮಿಗಳು ಇಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿರುವ ಈ ಉದ್ದಿಮೆಗಳಲ್ಲಿ ಸಾಂಪ್ರದಾಯಿಕ ಉತ್ಪಾದನೆಯಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನವನ್ನು ಆಧರಿಸಿದ ಉತ್ಪಾದನೆಯವರೆಗೆ ವ್ಯವಸ್ಥೆ ಇದೆ. ಇಲ್ಲಿ ಗುಂಡುಸೂಜಿಯಿಂದ ಹಿಡಿದು ವಿಮಾನದವರೆಗೆ ಎಲ್ಲವೂ ತಯಾರಾಗುತ್ತಿದೆ. ನಮ್ಮಲ್ಲಿ ಇಂಜಿನಿಯರಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎರಡೂ ಆಧಾರಸ್ತಂಭಗಳಾಗಿವೆ. ಇದರಿಂದಾಗಿ ಜಾಗತಿಕ ಗುಣಮಟ್ಟದ ತಯಾರಿಕೆ, ರಫ್ತು ವಹಿವಾಟು ಮತ್ತು ಉದ್ಯೋಗಸೃಷ್ಟಿ ಮೂರೂ ಸ್ಥಿರವಾಗಿ ನಡೆಯುತ್ತಿದೆ ಎಂದು ಎಂ.ಬಿ.ಪಾಟೀಲ್ ನುಡಿದರು.
ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಬೆಳೆಸಲು ಹಲವು ಸೌಕರ್ಯಗಳನ್ನು ಕೊಡಲಾಗುತ್ತಿದೆ. ಎಂಎಸ್‍ಎಂಇ ಕನೆಕ್ಟ್ ಅಡಿಯಲ್ಲಿ 1,800 ಉದ್ದಿಮೆಗಳಿಗೆ ನೆರವು ಒದಗಿಸುತ್ತಿದ್ದು, ಇವುಗಳ ಪೈಕಿ 60 ಉದ್ದಿಮೆಗಳು ಈಗಾಗಲೇ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ವೆಂಚುರೈಸ್ ಉಪಕ್ರಮದ ಮೂಲಕ ನವೋದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಮಾರ್ಗದರ್ಶನ ಮತ್ತು ಆರ್ಥಿಕ ನಿಧಿಯನ್ನು ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಪಿಐಎ ಅಧ್ಯಕ್ಷ ಶಿವಕುಮಾರ್, ಕೆಎಸ್‍ಎಸ್‍ಐಡಿಸಿ ಅಧ್ಯಕ್ಷ ಟಿ.ರಘುಮೂರ್ತಿ, ಎಂಎಸ್‍ಎಂಇ ಇಲಾಖೆಯ ನಿರ್ದೇಶಕ ನಿತೀಶ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.