×
Ad

ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ : ಎಂ.ಬಿ.ಪಾಟೀಲ್

Update: 2025-06-02 23:18 IST

ಬೆಂಗಳೂರು  ನೈಡೆಕ್ ಕಂಪೆನಿಯು 600 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಅಭಿವೃದ್ಧಿ ಪಡಿಸಿರುವ ನೂತನ ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೋಮವಾರ ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಿದರು.

ಜಪಾನ್ ಮತ್ತು ಫ್ರೆಂಚ್ ತಂತ್ರಜ್ಞಾನದ ಸಂಯೋಗವಿರುವ ಈ ಘಟಕವು 800 ಜನರಿಗೆ ನೇರ ಉದ್ಯೋಗ ನೀಡಲಿದೆ. ಕಂಪೆನಿಯ ಬ್ಯಾಟರಿ ಸೊಲ್ಯೂಷನ್ ಸ್ಥಾವರಕ್ಕೆ 20 ಎಕರೆ ಭೂಮಿ ಕೊಡಲಾಗಿದೆ. ಇಲ್ಲಿ ತಯಾರಾಗುವ 2, 3 ಮತ್ತು 4 ಮೆಗಾವ್ಯಾಟ್ ಸಾಮರ್ಥ್ಯದ ಹೆವಿ ಡ್ಯೂಟಿ ಮಶೀನ್‍ಗಳು ಡೇಟಾ ಸೆಂಟರ್ ಉದ್ಯಮದ ಅಗತ್ಯ ಪೂರೈಸಲಿದೆ.

ಈ ಸಾಧನಗಳನ್ನು ಅಮೆರಿಕ ಮತ್ತು ಯೂರೋಪ್‍ಗೆ ರಫ್ತು ಮಾಡಲಾಗುವುದು. ಘಟಕವು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದರೆ 3,000 ಉದ್ಯೋಗಸೃಷ್ಟಿ ಆಗಲಿದೆ. ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈ ಕಾರ್ಖಾನೆ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಡೇಟಾ ಸೆಂಟರ್ ಉದ್ಯಮಕ್ಕೆ ಬೇಕಾದ ಪವರ್ ಬ್ಯಾಕಪ್ ಜನರೇಟರ್, ವಿಂಡ್ ಜನರೇಟರ್, ಬ್ಯಾಟರಿ ಸ್ಟೋರೇಜ್, ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಬಸ್ ಇವುಗಳಿಗೆ ಬೇಕಾದ ಸಾಧನಗಳನ್ನು ಉತ್ಪಾದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮ ಸರಕಾರವು ಉತ್ತರ ಕರ್ನಾಟಕದ ಭಾಗಗಳಲ್ಲೂ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಹಲವು ರಿಯಾಯಿತಿ ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನೈಡೆಕ್ ಕಂಪನಿಯ ಈ ಯೋಜನೆಗೆ ಕೇವಲ ಎರಡು ವರ್ಷಗಳಲ್ಲಿ ಭೂಮಿ ಮಂಜೂರು ಮಾಡಿ, ತ್ವರಿತವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಕೃಷ್ಣಾ ನ್ಯಾಯಾಧಿಕರಣವು ಕೈಗಾರಿಕಾ ಅಗತ್ಯಗಳ ಬಳಕೆಗೆ 4 ಟಿಎಂಸಿ ನೀರನ್ನು ಮೀಸಲಿಟ್ಟಿದೆ. ಇದರಲ್ಲಿ ನಾವು ಇದುವರೆಗೆ ಕೇವಲ ಅರ್ಧ ಟಿಎಂಸಿ ನೀರನ್ನು ಮಾತ್ರ ಬಳಸಿಕೊಂಡಿದ್ದೇವೆ. ಇದರಲ್ಲಿ ಇನ್ನೂ 3.5 ಟಿಎಂಸಿ ನೀರು ಹಾಗೆಯೇ ಇದೆ. ಇದರಲ್ಲಿ ನಾವು ರೈತರ ಪಾಲಿನ ನೀರನ್ನೇನೂ ಮುಟ್ಟಿಲ್ಲ. ಹಿಡಕಲ್ ಜಲಾಶಯದ ಕೆಳಭಾಗದ ನೀರನ್ನಷ್ಟೇ ಬಳಸಿಕೊಂಡಿದ್ದೇವೆ. ಕೈಗಾರಿಕೆಗಳು ಬೆಳೆಯಬೇಕು ಎಂದರೆ ನೀರು ಅತ್ಯಗತ್ಯ ಎಂದು ಅವರು ನುಡಿದಿದ್ದಾರೆ.

ಉದ್ದಿಮೆಗಳಿಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ರೈತರಿಗೆ ತಕ್ಕ ಪರಿಹಾರ ಕೊಡಬೇಕಾಗುತ್ತದೆ. ನಾವು ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಪಾನ್ ಕಾನ್ಸುಲ್ ಜನರಲ್ ನಕಾನೆ ಸುಟೋಮು, ಫ್ರಾನ್ಸ್ ಕಾನ್ಸುಲ್ ಜನರಲ್ ಮಾರ್ಕ್ ಲಾಮಿ, ಕಂಪೆನಿಯ ಹಿರಿಯ ಅಧಿಕಾರಿಗಳಾದ ಮೈಕೆಲ್ ಬ್ರಿಗ್ಸ್, ಗ್ರೆಗ್ ಗಾರ್ಮನ್, ಗಿರೀಶ್ ಕುಲಕರ್ಣಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News