ಕರ್ನಾಟಕ ದೇಶದಲ್ಲೇ ನಂ.1 ಉತ್ಪಾದನಾ ವಲಯವನ್ನಾಗಿಸಲು ಕ್ರಮ : ಸಚಿವ ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್
ಬೆಂಗಳೂರು : ದೇಶದಲ್ಲೇ ಕರ್ನಾಟಕ ನಂ.1 ಉತ್ಪಾದನಾ ವಲಯವನ್ನಾಗಿ ಅಭಿವೃದ್ಧಿಪಡಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಎರಡು ವರ್ಷಗಳ ಸಾಧನೆ ಕುರಿತ ಪ್ರಗತಿ ಪಥದ ಮುಂದಣ ಹೆಜ್ಜೆ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಯೆಟ್ನಾಂ ಹಾಗೂ ಇತರ ದೇಶಗಳಂತೆ ಕರ್ನಾಟಕದಲ್ಲೂ ಉತ್ಪಾದನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಈಗ ನಾಲ್ಕನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಶ್ರೀನಿವಾಸಪುರದಲ್ಲಿ ಫಾರ್ಮ ಪಾರ್ಕ್, ವಿಜಯಪುರದಲ್ಲಿ ಎಲೆಕ್ಟ್ರಿಕಲ್ ಸೆಲ್ ಉತ್ಪಾದನೆ, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಹುಬ್ಬಳ್ಳಿಯಲ್ಲಿ ನವೋದ್ಯಮ ಹಾಗೂ ಭವಿಷ್ಯದ ತಾಂತ್ರಿಕ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಅದೇ ರೀತಿ, ದಾಬಸ್‍ಪೇಟೆ-ದೊಡ್ಡಬಳ್ಳಾಪುರ ನಡುವೆ ಆರೋಗ್ಯ, ಶಿಕ್ಷಣ ಸೇವೆಗಳ ಮೂಲಕ ಕ್ಲೀನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಡೆ ವಿಶೇಷ ಪಾರ್ಕ್ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹುಬ್ಬಳ್ಳಿಯ ಎನ್‍ಜಿಎಫ್ ಅನ್ನು ಪುನರುಜ್ಜೀವನ ಗೊಳಿಸಲಾಗುವುದು. ಎಂಎಸ್‍ಐಎಲ್‍ನ ಚಿಟ್ ಫಂಡ್ ವಹಿವಾಟನ್ನು 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿದರು.
ಮೈಸೂರು ಸ್ಯಾಂಡಲ್‍ನ ಕೆಎಸ್‍ಡಿಸಿಎಲ್ ವಹಿವಾಟು ಈ ತಿಂಗಳಿನಲ್ಲಿ 180 ಕೋಟಿ ರೂ. ದಾಟಿದ್ದು ಐತಿಹಾಸಿಕ ದಾಖಲೆಯಾಗಿದೆ. ಒಟ್ಟು ವಹಿವಾಟನ್ನು ಮುಂದಿನ 3 ವರ್ಷದಲ್ಲಿ 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಇದೆ ಎಂದ ಅವರು, ಬಂಡವಾಳ ಹೂಡಿಕೆಯಲ್ಲಿ ಗಣನೀಯ ಸಾಧನೆಯಾಗಿದೆ. 115 ಒಡಂಬಡಿಕೆಗಳಿಂದ 6,58,660 ಕೋಟಿ ರೂ. ಹೂಡಿಕೆಯಾಗಿದ್ದು, 2,32,771 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಏಕಗವಾಕ್ಷಿ ಅನುಮೋದನಾ ಸಮಿತಿ 1,13,200 ಕೋಟಿ ರೂ. ಹೂಡಿಕೆಯ 906 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದು, 2,23,982 ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅವರು ವಿವರಿಸಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 3,550 ಉದ್ಯೋಗಿಗಳು ಭಾಗವಹಿಸಿದ್ದು, 6,23,957 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ 4.03 ಲಕ್ಷ ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರವಲಯದಲ್ಲಿದ್ದು, ಶೇ.45 ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಯಾಗುತ್ತದೆ ಎಂದು ಸಚಿವರು ನುಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಆಯುಕ್ತೆ ಗುಂಜನ್ ಕೃಷ್ಣ, ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮನೋಜ್ ಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ್, ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಸೇರಿದಂತೆ ಪ್ರಮುಖರಿದ್ದರು.
ಶೇ.70ರಷ್ಟು ಹಣ ಸ್ಥಳೀಯವಾಗಿ ಬಳಕೆ: 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ವಲಯಗಳನ್ನಾಗಿ ಘೋಷಣೆ ಮಾಡಿದ್ದು, ಇಲ್ಲಿನ ಆಸ್ತಿ ತೆರಿಗೆಯನ್ನು ಕೆಇಎಡಿಬಿ ವಸೂಲಿ ಮಾಡಲಿದೆ. ಸಂಗ್ರಹ ವಾದ ತೆರಿಗೆಯ ಶೇ.70ರಷ್ಟು ಹಣವನ್ನು ಆಯಾ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಗೆ ವಿನಿಯೋಗ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕಾರವಾರದಲ್ಲಿ ಸಿವಿಲ್ ಎನ್‍ಕ್ಲೇವ್: ಭಾರತೀಯ ನೌಕಾಪಡೆಯ ಸೀಬರ್ಡ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ರಕ್ಷಣಾ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನಕ್ಕೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರಕಾರದ ಕ್ರಮ ಕೈಗೊಳ್ಳಲಾಗುವುದು. ನೌಕಾಪಡೆ ಸಹಯೋಗದಲ್ಲಿ ಸಿವಿಲ್ ಎನ್‍ಕ್ಲೇವ್ ನಿರ್ಮಿಸಲು ಅಂಕೋಲಾದಿಂದ 5 ಕಿ.ಮೀ ದೂರದಲ್ಲಿ 27.84 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2025-26ನೆ ಸಾಲಿನಲ್ಲಿ ಮುಗಿಯುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗುವ 82 ಕೋಟಿ ರಾಜ್ಯವೇ ಭರಿಸಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
‘ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸದ್ಯದಲ್ಲೇ ಕಲಾ ಲೋಕ ಪ್ರದರ್ಶನ ಮಳಿಗೆ ಆರಂಭಿಸಲಾಗುವುದು. ಅಲ್ಲಿ ನಮ್ಮ ಎಲ್ಲ ಹೆರಿಟೇಚ್ ಉತ್ಪನ್ನಗಳ ಮಳಿಗೆ ಇರಲಿವೆ. ಉದಾಹರಣೆಗೆ ಮೈಸೂರು ಸಿಲ್ಕ್, ಕಾವೇರಿ ಎಂಪೊರಿಯಂ ಉತ್ಪನ್ನಗಳು, ಮೈಸೂರು ಸ್ಯಾಂಡಲ್ ಸೋಪು ಇತ್ಯಾದಿಯವು ಇರಲಿವೆ’
-ಎಂ.ಬಿ.ಪಾಟೀಲ್ ಬೃಹತ್ ಕೈಗಾರಿಕಾ ಸಚಿವ