×
Ad

ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ರೂ.ನೀಡಲು ಒಪ್ಪಿಗೆ : ಎಂ.ಬಿ.ಪಾಟೀಲ್

Update: 2025-09-19 18:35 IST

ಎಂ.ಬಿ.ಪಾಟೀಲ್

ಬೆಂಗಳೂರು, ಸೆ. 19: ಏರ್‌ ಬಸ್-320 ಮಾದರಿಯ ದೊಡ್ಡ ವಿಮಾನಗಳ ಕಾರ್ಯಾಚರಣೆ ಮತ್ತು ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯ ಅಭಿವೃದ್ಧಿ ಸೇರಿದಂತೆ ಇತರ ಅನುಕೂಲಗಳಿಗಾಗಿ ವಿಜಯಪುರ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 270.83ಕೋಟಿ ರೂ.ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿನ ಒಟ್ಟು ವೆಚ್ಚವು 618.75ಕೋಟಿ ರೂ.ಗಳಾಗಲಿದೆ. ಎಟಿಆರ್ ಮಾದರಿಯ ನಾಗರಿಕ ವಿಮಾನ ಕಾರ್ಯಾಚರಣೆಗೆ ಸೀಮಿತವಾಗಿದ್ದ ವಿಮಾನ ನಿಲ್ದಾಣದ ಮೂಲ ವಿನ್ಯಾಸವನ್ನು ಏರ್‌ ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವಂತೆ ಬದಲಿಸಿದ್ದರಿಂದ ವೆಚ್ಚ ಹೆಚ್ಚಾಗುತ್ತಿದೆ’ ಎಂದರು.

ವಿಮಾನ ನಿಲ್ದಾಣದ ಮೂಲವಿನ್ಯಾಸವನ್ನು ಚಿಕ್ಕ ವಿಮಾನಗಳನ್ನು ಗಮನದಲ್ಲಿ ಇಟ್ಟಿಕೊಂಡು ಮಾತ್ರ ಮಾಡಲಾಗಿತ್ತು. ಅದರಲ್ಲಿ ಏರ್‌ ಬಸ್ ಮಾದರಿಯ ವಿಮಾನ ಕಾರ್ಯಾಚರಣೆಗಳಿಗಾಗಲಿ, ನೈಟ್ ಲ್ಯಾಂಡಿಂಗ್‍ಗಾಗಲಿ ಅವಕಾಶವಿರಲಿಲ್ಲ. ಆದರೆ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ನಗರಗಳು ಕ್ಷಿಪ್ರವಾಗಿ ಬೆಳೆಯುತ್ತಿವೆ. ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರ, ಸತಾರಾ ಜಿಲ್ಲೆಗಳೂ ವಿಜಯಪುರಕ್ಕೆ ಹತ್ತಿರವಾಗಿವೆ. ಇತ್ತ ಬೆಳಗಾವಿ, ಕಲಬುರಗಿ ಜಿಲ್ಲೆಯ ಹಲವು ತಾಲೂಕುಗಳ ಒಡನಾಟವೂ ವಿಜಯಪುರದೊಂದಿಗೆ ಹೆಚ್ಚಾಗಿದೆ. ಹೀಗಾಗಿ ಮುಂದಿನ 50 ವರ್ಷಗಳ ಅಗತ್ಯವನ್ನು ಪರಿಗಣಿಸಿ, ಹಲವು ಹೆಚ್ಚುವರಿ ಸೌಲಭ್ಯಗಳನ್ನು ಈಗ ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗ ಒದಗಿಸಲಾಗಿರುವ ಹಣದಲ್ಲಿ ನೈಟ್ ಲ್ಯಾಂಡಿಂಗ್ ಸಂಬಂಧಿತ ಕಾಮಗಾರಿಗಳು, ರನ್ ವೇಯ ಎರಡೂ ಬದಿಗಳಿಗೆ ಪೇವ್ಡ್ ಶೋಲ್ಡರ್ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಬಾಬ್ತಿಗೆ 65 ಕೋಟಿ ರೂ.ವಿನಿಯೋಗಿಸಲಾಗುವುದು. ವಿಜಯಪುರ ವಿಮಾನ ನಿಲ್ದಾಣದಿಂದ ರಾ.ಹೆ.50ಕ್ಕೆ ಸಂಪರ್ಕ ಕಲ್ಪಿಸಲಿರುವ ಮೀಸಲು ರಸ್ತೆಯ ಅಭಿವೃದ್ಧಿಗೆ 52ಕೋಟಿ ರೂ.ವೆಚ್ಚವಾಗಲಿದೆ. ವಿಮಾನ ನಿಲ್ದಾಣದ ಮೂಲವಿನ್ಯಾಸದಲ್ಲಿ ಇವುಗಳ ಪ್ರಸ್ತಾಪವೇ ಇರಲಿಲ್ಲ ಎಂದು ಅವರು ತಿಳಿಸಿದರು.

ಇದಲ್ಲದೆ 25 ಕೋಟಿ ರೂ.ವೆಚ್ಚದಲ್ಲಿ ಎರಡು ವಿಮಾನ ರಕ್ಷಣೆ ಮತ್ತು ಅಗ್ನಿಶಾಮಕ ವಾಹನಗಳು (ಎಆರ್‍ಎಫ್‍ಎಫ್) ಮತ್ತು ಉಪಕರಣಗಳನ್ನು ಖರೀದಿಸಲಾಗುವುದು. ಮಿಕ್ಕಂತೆ 2.76ಕೋಟಿ ರೂ.ಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಉಪಕರಣಗಳು (ಬಿಡಿಡಿಎಸ್) ಮತ್ತು 13.09 ಕೋಟಿ ರೂ. ವೆಚ್ಚದಲ್ಲಿ ಡಿವಿಒಆರ್ (ಡೋಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್)ಉಪಕರಣಗಳ ಖರೀದಿ ಮತ್ತು ಅಳವಡಿಕೆ ಕೆಲಸಗಳು ನಡೆಯಲಿವೆ ಎಂದೂ ಅವರು ಮಾಹಿತಿ ನೀಡಿದರು.

ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡಗಳು ಕಾಲಕಾಲಕ್ಕೆ ಪರಿಶೀಲಿಸುತ್ತಿದೆ. ಅದು ನಿಗದಿತ ಮಾನದಂಡಗಳಿಗೆ ನೀಡಿದ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚುವರಿ ಹಣಕಾಸು ನೆರವು ಕೋರಿ ಈ ವರ್ಷದ ಫೆಬ್ರವರಿಯಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಲಹೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿಗೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದು ತನ್ನ ಒಪ್ಪಿಗೆ ನೀಡಿದ ನಂತರ ಸಂಪುಟ ಸಭೆಯ ಮುಂದೆ ಬಂದಿತ್ತು ಎಂದು ಅವರು ವಿವರಿಸಿದರು.

ವಿಮಾನ ನಿಲ್ದಾಣವನ್ನು ವಿಜಯಪುರ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಕೈಗಾರಿಕಾ, ಆರ್ಥಿಕ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ದೂರದೃಷ್ಟಿಯಿಂದ ನಿರ್ಮಿಸಲಾಗುತ್ತಿದೆ. ಈ ನಿಲ್ದಾಣವು ಕಾರ್ಯಾಚರಣೆ ಆರಂಭಿಸಿದ ನಂತರ ಕರ್ನಾಟಕ ಮತ್ತು ಉತ್ತರ ಭಾರತದ ನಡುವೆ ಸೇತುವೆಯಾಗಿ ಪರಿಣಮಿಸಲಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News