ಮಲೆನಾಡು ಭಾಗದ ನಾಲ್ವರಲ್ಲಿ ಮಂಗನ ಕಾಯಿಲೆ ಪತ್ತೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್
ಸಿ.ಎನ್.ಮೀನಾ ನಾಗರಾಜ್
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಾಲ್ಕು ಕೆಎಫ್‌ಡಿ (ಮಂಗನ ಕಾಯಿಲೆ) ಪ್ರಕರಣಗಳು ಪತ್ತೆಯಾಗಿದ್ದು, ಮೂರು ಪ್ರಕರಣಗಳು ಸಕ್ರೀಯವಾಗಿವೆ. ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ಸೋಂಕಿನಿಂದ ಗುಣಮುಖನಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಹಾಗೂ ಕೊಪ್ಪ ತಾಲೂಕಿನಲ್ಲಿ ತಲಾ ಓರ್ವರಲ್ಲಿ ಸೋಂಕು ಕಾಣಸಿಕೊಂಡಿದ್ದು, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಇಬ್ಬರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಓರ್ವ ವ್ಯಕ್ತಿ ಗುಣಮುಖನಾಗಿದ್ದು, ಮೂರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಮಂಗನಕಾಯಿಲೆ ಕಾಣಿಸಿಕೊಂಡಿರುವ ಪ್ರದೇಶದ ಸುತ್ತಮುತ್ತ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಗಳ ಸಾವು ಮತ್ತು ಮಂಗನಕಾಯಿಲೆ ಹರಡಲು ಬಹುಮುಖ್ಯ ಕಾರಣವಾಗುತ್ತಿರುವ ಸೋಂಕಿತ ಉಣಗುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಂಗನಕಾಯಿಲೆ ಕಾಣಿಸಿಕೊಂಡಿರುವ ಸುತ್ತಮುತ್ತಲ ಪ್ರದೇಶದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಭಾಗದ ಜನರಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡರೇ ನಿರ್ಲಕ್ಷ್ಯವಹಿಸದೆ ತಕ್ಷಣ ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ಡಿಎಚ್‌ಒ ಡಾ.ಅಶ್ವಥ್ ಬಾಬು ಮಾತನಾಡಿ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಸದ್ಯ ಸೋಂಕು ಕಾಣಿಸಿಕೊಂಡಿದ್ದು, ಈ ಪ್ರದೇಶವನ್ನು ರೆಡ್ ಜೋನ್ ಎಂದು ಗುರುತಿಸಿ ಸೋಂಕು ಪತ್ತೆಗೆ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಡಿಗೆ ಹೋಗುವವರಿಗೆ ಕೈಕಾಲಿಗೆ ಲೇಪಿಸಿಕೊಳ್ಳಲು ದ್ರಾವಣ ನೀಡಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಕೋವಿಡ್ ಮಾದರಿಯ ವಾರ್ಡ್ ಆರಂಭಿಸಲಾಗಿದೆ. ಹೆಚ್ಚಿನ ಚಿಕತ್ಸೆಯ ಅತ್ಯವಿದ್ದಲ್ಲಿ ಸೋಂಕಿತರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು. ಕೆಎಫ್‌ಡಿಗೆ ಯಾವುದೇ ವ್ಯಾಕ್ಸಿನ್ ಸದ್ಯ ಇಲ್ಲ ಎಂದರು.