ನವೋದ್ಯಮಿಗಳಿಗೆ ಎಂಐಎ ನೀಡುತ್ತಿರುವ ಬೆಂಬಲ ಮುಂದಿನ ಪೀಳಿಗೆಗೆ ದಾರಿದೀಪ : ಸಲೀಂ ಅಹ್ಮದ್
‘ಉಡಾನ್ 2026-ಅಲ್ಪಸಂಖ್ಯಾತ ಉದ್ಯಮಶೀಲತೆಯ ಉನ್ನತೀಕರಣ’ ಕಾರ್ಯಕ್ರಮ
ಬೆಂಗಳೂರು : ಮುಸ್ಲಿಮ್ ಕೈಗಾರಿಕೋದ್ಯಮಿಗಳ ಸಂಘ (ಎಂಐಎ) ನವೋದ್ಯಮಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಬೆಂಬಲ ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ದಾರಿದೀಪವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಹೇಳಿದರು.
ಶನಿವಾರ ನಗರದ ಎಚ್ಬಿಆರ್ ಲೇಔಟ್ನ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಎಂಐಎ ವತಿಯಿಂದ ಆಯೋಜಿಸಿದ್ದ ‘ಉಡಾನ್ 2026-ಅಲ್ಪಸಂಖ್ಯಾತ ಉದ್ಯಮಶೀಲತೆಯ ಉನ್ನತೀಕರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನವೋದ್ಯಮಿಗಳಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ನೀಡುವ ಮೂಲಕ ಎಂಐಎ ಉದ್ಯಮಶೀಲತೆಯ ಬೆಳವಣಿಗೆಗೆ ನೆರವಾಗುತ್ತಿದೆ. ಸಂಘದ ಈ ಪ್ರಯತ್ನಗಳು ಯುವಜನರು ಹೊಸ ಉದ್ಯಮಗಳನ್ನು ಆರಂಭಿಸಲು ಪ್ರೇರಣೆ ನೀಡಲಿದ್ದು, ಮುಂದಿನ ಪೀಳಿಗೆಯಲ್ಲೂ ಉದ್ಯಮಶೀಲತೆಯ ಮನೋಭಾವ ಬೆಳೆಸಲು ಸಹಕಾರಿಯಾಗಲಿವೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ನವೋದ್ಯಮಗಳು ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರಕಾರದಲ್ಲಿಯೂ ಹಲವಾರು ಯೋಜನೆಗಳು ಮತ್ತು ಸೌಲಭ್ಯಗಳಿವೆ. ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಯುವಕರು ಇವುಗಳ ಬಗ್ಗೆ ಮಾಹಿತಿ ಪಡೆದು, ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸರಕಾರದ ಯೋಜನೆಗಳ ಪ್ರಯೋಜನ ಪಡೆದು ಸ್ವಂತ ಉದ್ಯಮಗಳನ್ನು ಸ್ಥಾಪಿಸುವುದರ ಜತೆಗೆ ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವತ್ತ ಗಮನಹರಿಸಬೇಕು. ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸರಕಾರ ಮತ್ತು ಉದ್ಯಮ ವಲಯದ ನಡುವೆ ಸಮನ್ವಯ ಹಾಗೂ ಸಹಕಾರ ಅಗತ್ಯವಾಗಿದೆ ಎಂದು ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಎಂಐಎ ಆಯೋಜಿಸಿರುವ ‘ಉಡಾನ್ 2026’ ಕಾರ್ಯಕ್ರಮ ನವೋದ್ಯಮಿಗಳಿಗೆ ತಮ್ಮ ಉದ್ಯಮದ ಪರಿಕಲ್ಪನೆಗಳನ್ನು ಪರಿಚಯಿಸಲು ಹಾಗೂ ಹೂಡಿಕೆದಾರರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಆಯ್ದ ನವೋದ್ಯಮಗಳು ಮತ್ತು ಉದ್ಯಮಿಗಳನ್ನು ಗುರುತಿಸಿ ಗೌರವಿಸಲಾಯಿತು. ಆಯ್ಕೆಯಾದವರಿಗೆ ತಮ್ಮ ಉತ್ಪನ್ನಗಳು, ಸೇವೆಗಳು ಹಾಗೂ ಉದ್ಯಮದ ಪರಿಕಲ್ಪನೆಗಳನ್ನು ಹೂಡಿಕೆದಾರರು ಮತ್ತು ಉದ್ಯಮ ಕ್ಷೇತ್ರದ ಗಣ್ಯರ ಮುಂದೆ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಐಎ ಅಧ್ಯಕ್ಷ ಅಬ್ದುಲ್ ರಶೀದ್ ಬಿ.ಜೆ., ಉಪಾಧ್ಯಕ್ಷ ತಾಹೀರ್ ಶರೀಫ್, ಖಜಾಂಚಿ ಹಿದಾಯತುಲ್ಲಾ, ಜಂಟಿ ಖಜಾಂಚಿ ಮುನೀರ್ ಅಹ್ಮದ್, ಕಾರ್ಯಕ್ರಮದ ಮುಖ್ಯಸ್ಥ ಹಾಗೂ ಕೌನ್ಸಿಲ್ ಸದಸ್ಯ ಸುಹೇಲ್ ಎಚ್.ಎ., ಕೌನ್ಸಿಲ್ ಸದಸ್ಯರಾದ ಶಫಿ ಮತ್ತು ಶೋಯೆಬ್ ವಲೈ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.