ಟಿ.ಎ.ನಾರಾಯಣಗೌಡ

ಬೆಂಗಳೂರು : ಐಟಿ-ಬಿಟಿ ಕಂಪೆನಿಗಳಿಗೆ ಭೇಟಿ ನೀಡಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಆಗ್ರಹಿಸುವ ಅಭಿಯಾನ ನಿಲ್ಲಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಷಯವನ್ನು ಗಮನಿಸಿದ್ದು, ಈ ವಿಚಾರದಲ್ಲಿ ಸರಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪೆನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸರಕಾರದ ಕಾಳಜಿ ಸ್ವಾಗತಾರ್ಹ. ಆದರೆ ಇದು ಕೇವಲ ಮಾತುಗಳಲ್ಲಿ ಕಾಣಿಸಿಕೊಂಡರೆ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸರಕಾರ ಕ್ರಿಯೆಗೆ ಇಳಿಯಬೇಕು. ಎಷ್ಟೋ ಸರಕಾರಗಳು ಬಂದು ಹೋಗಿವೆ. ಸಮಸ್ಯೆಗಳನ್ನು ಬಗೆಹರಿಸುವುದಿರಲಿ, ಕನ್ನಡಿಗರ ಕಷ್ಟಗಳಿಗೆ ಕನಿಷ್ಠ ಕಿವಿಯಾಗುವ ಕೆಲಸವನ್ನೂ ಮಾಡಲಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡುವ ಕೆಲಸವನ್ನು ಸರಕಾರಗಳು ಮಾಡಿದ್ದರೆ ನಾವು ಅಭಿಯಾನ ನಡೆಸುವ ಅಗತ್ಯ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಐಟಿ-ಬಿಟಿ ಸಂಸ್ಥೆಗಳಿಗೆ ತೆರಳಿ ಮನವಿ ಸಲ್ಲಿಸುವ ಆಗ್ರಹ ಅಭಿಯಾನವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಮುಖ್ಯಮಂತ್ರಿಯಾದಿಯಾಗಿ ಯಾರೂ ಭಾವಿಸಬೇಕಿಲ್ಲ. ನಾವು ಹೋಗುತ್ತಿರುವುದು ಸಂಘರ್ಷ ಸೃಷ್ಟಿಸಲು ಅಲ್ಲ; ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಲು. ಹಾಗೆಯೇ ಯಾವ ಸಂಸ್ಥೆಗಳಲ್ಲಿ ಕನ್ನಡಿರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬುದನ್ನು ನೇರವಾಗಿ ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಅಭಿಯಾನದಲ್ಲಿ ಭಾಗವಹಿಸುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಯಾವುದೇ ಪ್ರತಿಭಟನೆ, ಘರ್ಷಣೆಗಳನ್ನು ನಡೆಸಲು ಅವರು ಹೋಗುತ್ತಿಲ್ಲ. ಆ ವಿವೇಕ, ತಿಳಿವಳಿಕೆ, ಸಾಮಾಜಿಕ ಪ್ರಜ್ಞೆ ನಮಗೆ ಇದೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆತಂಕಪಡುವ ಅಗತ್ಯ ಇಲ್ಲ ಎಂದು ಟಿ.ಎ.ನಾರಾಯಣಗೌಡ ಸ್ಪಷ್ಟಪಸಿದ್ದಾರೆ.

ನಮ್ಮ ಅಭಿಯಾನವನ್ನು ನಿಲ್ಲಿಸಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶ. ಎಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ. ಸರಕಾರ ನಮ್ಮ ಅಭಿಯಾನ ನಿಲ್ಲಿಸಲು ಬಲಪ್ರಯೋಗದಂಥ ಕೃತ್ಯಗಳನ್ನು ಅಸಾಂವಿಧಾನಿಕವಾಗಿ ನಡೆಸಲು ಮುಂದಾದರೆ ಸರಕಾರವೇ ನೇರವಾಗಿ ಸಂಘರ್ಷಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅದು ಅನಗತ್ಯವಾಗಿ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಅಭಿಯಾನ ಪೂರ್ಣಗೊಂಡ ನಂತರ ನಮಗೆ ಈ ಸತ್ಯಶೋಧನೆಯಲ್ಲಿ ತಿಳಿದುಬರುವ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ನಾವೇ ಸರಕಾರಕ್ಕೆ ಸಲ್ಲಿಸುತ್ತೇವೆ. ನಂತರ ಸರಕಾರ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor