ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದು ಖಚಿತ : ಸಚಿವ ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಬೆಂಗಳೂರು : ರಾಜ್ಯ ಸರಕಾರ ಅಧಿಕಾರ ವಿಕೇಂದ್ರೀಕರಣದ ಪರವಾಗಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೆ ಕರಡು ಮೀಸಲು ಅಧಿಸೂಚನೆ ಹೊರಡಿಸಿದೆ. ಬರುವ ಜನವರಿಯೊಳಗೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ನಡೆದೇ ನಡೆಯುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.19ರವರೆಗೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿದ್ದು, ಅಧಿಕಾರಿಗಳು ನಿಯಮಾನುಸಾರ ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಿದ ತರುವಾಯ ರಾಜ್ಯ ಚುನಾವಣಾ ಆಯೋಗ, ಕೇಂದ್ರ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪಡೆದು ಅಥವಾ ತನ್ನಲ್ಲಿರುವ ಮತದಾರರ ಪಟ್ಟಿಯನ್ನೆ ಪರಿಷ್ಕರಿಸಿ ಚುನಾವಣೆ ನಡೆಸುವ ಕುರಿತಂತೆ ಕ್ರಮ ವಹಿಸಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಕೇಂದ್ರದ ವಿರುದ್ಧ ಕಬ್ಬುಬೆಳೆಗಾರರ ಹೋರಾಟಕ್ಕೆ ಬೆಂಬಲ :
ಕಬ್ಬು ಬೆಳೆಗಾರರು ನ್ಯಾಯಸಮ್ಮತ ಮತ್ತು ಲಾಭದಾಯಕ (ಎಫ್.ಆರ್.ಪಿ.) ದರ ಘೋಷಣೆಗೆ ಒತ್ತಾಯಿಸಿ ಕೇಂದ್ರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು, ಅದೇ ರೀತಿ ರೈತರಿಗೂ ಲಾಭದಾಯಕ ಬೆಲೆ ದೊರಕಬೇಕು, ಆದರೆ ಕೇಂದ್ರ ಸರಕಾರ ಈ ಬಗ್ಗೆ ಚಿಂತನೆಯನ್ನೆ ಮಾಡುತ್ತಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು.
ಕಬ್ಬಿನ ದರ ಹೆಚ್ಚಳ ಮಾಡಿದರೆ, ಸಕ್ಕರೆ ದರ ಏರುತ್ತದೆ. ಈಗಾಗಲೆ ಡೀಸೆಲ್, ಪೆಟ್ರೋಲ್, ಅಕ್ಕಿ, ಗೋಧಿ, ಬೇಳೆ, ರಸಗೊಬ್ಬರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿರುವ ಕೇಂದ್ರ ಸರಕಾರ ಕಬ್ಬಿನ ಎಫ್.ಆರ್.ಪಿ. ದರ ಹೆಚ್ಚಿಸಬೇಕು, ಬಡ ಜನರಿಗೆ ರಿಯಾಯಿತಿ ದರದಲ್ಲಿ ಪಡಿತರ ಸಕ್ಕರೆ ವಿತರಿಸಬೇಕು ಎಂದು ಅವರು ಹೇಳಿದರು.
ಎಥೆನಾಲ್ ಉಪಯೋಗದಿಂದ ತೈಲ ಕಂಪನಿಗಳಿಗೆ ಲಾಭವಾಗುತ್ತಿದೆ. ಆದರೆ ರೈತರಿಗೆ ಲಾಭವಾಗುತ್ತಿಲ್ಲ. ರೈತರ ಹಿತ ಕಾಪಾಡಬೇಕಾದ್ದು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಾದ್ದು, ಕೇಂದ್ರ ಸರಕಾರದ ಕರ್ತವ್ಯ. ರಾಜ್ಯ ಸರಕಾರ ರೈತರಿಗೆ ಎಲ್ಲ ರೀತಿಯ ಬೆಂಬಲ, ಸಹಕಾರ ನೀಡುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
‘ಹಿರಿಯೂರು ಉಪ ಚುನಾವಣೆಗೆ ಸಜ್ಜು’:
‘ಮಾಜಿ ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಕೇಂದ್ರ ಚುನಾವಣಾ ಆಯೋಗ ಇನ್ನೂ ವೇಳಾಪಟ್ಟಿ, ಚುನಾವಣೆ ದಿನಾಂಕ ಪ್ರಕಟಿಸಿಲ್ಲ. ಯಾರನ್ನೂ ಕಣಕ್ಕಿಳಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಯಾವಾಗ ಚುನಾವಣೆ ನಡೆಸಿದರೂ ಎದುರಿಸಲು ನಾವು ಸಿದ್ಧ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ’.
-ಈಶ್ವರ್ ಖಂಡ್ರೆ, ಗ್ರಾಮೀಣಾಭಿವೃದ್ಧಿ ಸಚಿವ