×
Ad

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವ ಧನ ಹೆಚ್ಚಳ : ಸಚಿವ ಜಿ.ಪರಮೇಶ್ವರ್‌

Update: 2025-05-18 21:51 IST

ತುಮಕೂರು: ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ಹಾಗೂ ಸಹಾಯಕಿಯರಿಗೆ 750 ರೂ.ಗಳ ಗೌರವ ಧನವನ್ನು ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ನಗರ ಕೇಂದ್ರ ಗ್ರಂಥಾಲಯ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾಗಿದ್ದ “ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿ ಆದೇಶ ವಿತರಣಾ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರೂ. ಹಾಗೂ ಸಹಾಯಕಿಯರಿಗೆ 6250 ರೂ. ಗೌರವಧನ ನೀಡಲಾಗುತ್ತಿತ್ತು. ಇದೀಗ ಸರಕಾರದ ಆದೇಶದನ್ವಯ ಕಾರ್ಯಕರ್ತೆಯರಿಗೆ 12,000 ರೂ. ಹಾಗೂ ಸಹಾಯಕಿಯರಿಗೆ 7000 ರೂ. ಗೌರವಧನ ನೀಡಲಾಗುವುದು. ಕಳೆದ 2 ವರ್ಷಗಳಲ್ಲಿ ಇವರುಗಳ ಸಂಬಳವನ್ನು ಎರಡು ಬಾರಿ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿರುವ ಒಟ್ಟು 4199 ಅಂಗನವಾಡಿಗಳಲ್ಲಿ 3378 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ನಿರ್ಮಿಸಬೇಕಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ಪೋಷಕಾಂಶವುಳ್ಳ ಗುಣಮಟ್ಟದ ಆಹಾರವನ್ನು ನೀಡಬೇಕು. ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲು ಗರ್ಭಿಣಿಯರ ಆರೋಗ್ಯ ಮುಖ್ಯವಾಗಿದ್ದು, ಗರ್ಭಿಣಿಯರ ಆರೋಗ್ಯಕ್ಕಾಗಿ ಕೇಂದ್ರ ಸರಕಾರವು ಇಂಟಿಗ್ರೇಶನ್ ಚೈಲ್ಡ್ ಡೆವಲಪ್‍ಮೆಂಟ್ ಯೋಜನೆಯನ್ನು ಜಾರಿಗೆ ತಂದಿದೆ. ಸರಕಾರದ ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಾಯಂದಿರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದೇ ಅಂಗನವಾಡಿ ಕೇಂದ್ರಗಳ ಮುಖ್ಯ ಉದ್ದೇಶವಾಗಿದ್ದು, ಮಕ್ಕಳು ಆರು ವರ್ಷದವರೆಗೂ ಬೌದ್ಧಿಕ, ಮಾನಸಿಕ ಹಾಗೂ ದೈಹಿಕವಾಗಿ ಬೆಳೆಯಲು ಅಂಗನವಾಡಿ ಕಾರ್ಯಕರ್ತೆಯರು ನೆರವಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಬಡವರು, ಅನುಕೂಲಸ್ಥರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ಪರಿಣಾಮಕಾರಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಅಂಗನವಾಡಿ ಕೇಂದ್ರಗಳನ್ನು ಶಾಲಾ ಆವರಣದಲ್ಲಿಯೇ ನಡೆಸುವುದರಿಂದ ಮಕ್ಕಳ ಮುಂದಿನ ತರಗತಿ ಕಲಿಕೆಗೂ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ 86 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 212 ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್, ವಿವಿಧ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News