×
Ad

ಕೇಂದ್ರ ಸರಕಾರದಿಂದ ಗ್ರಾಮ ಸ್ವರಾಜ್ ಕಲ್ಪನೆಗೆ ಪೆಟ್ಟು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Update: 2026-01-27 15:02 IST

ಬೆಂಗಳೂರು : ಮಹಾತ್ಮ ಗಾಂಧಿಯವರ ಕನಸಿನ ಗ್ರಾಮ ಸ್ವರಾಜ್ ಕನಸಿಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಕಾಯಕಲ್ಪ ಕೊಟ್ಟಿದ್ದರೆ ಇಂದಿನ ಸರಕಾರ ಮಹಾತ್ಮ ಗಾಂಧಿ ಕನಸಿಗೆ ಪೆಟ್ಟು ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಟೀಕಿಸಿದರು.

ಫ್ರೀಡಂ ಪಾರ್ಕ್ ನಲ್ಲಿ ಕೆ.ಪಿ.ಸಿ.ಸಿ ವತಿಯಿಂದ ಮಂಗಳವಾರ ನಡೆದ " ನರೇಗಾ ಬಚಾವ್ ಸಂಗ್ರಾಮ್" ಆಂದೋಲನದ ಅಡಿಯಲ್ಲಿ ಬೃಹತ್‌ ಪ್ರತಿಭಟನೆ ಹಾಗೂ ರಾಜಭವನ್ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಗಳು ಗ್ರಾಮ ಪಂಚಾಯತಿಗೆ ಶಕ್ತಿ ನೀಡಿದ್ದವು, ಆದರೆ ಇಂದು ಅದನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು.

ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂದು ಮಹಾತ್ಮಗಾಂಧಿ ಹೇಳುತ್ತಿದ್ದರು. ಈ ಮಾತನ್ನು ಸಕಾರಗೊಳಿಸಿದ್ದು ರಾಜೀವ್ ಗಾಂಧಿ, ಇದಕ್ಕೆ ಗ್ರಾಮ ಪಂಚಾಯತಿಗಳಿಗೆ ಹೆಚ್ಚು ಅಧಿಕಾರ ನೀಡಿದರು. ಗ್ರಾಮ ಮಟ್ಟದಲ್ಲಿ ಆಡಳಿತ ನಡೆಯಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದು‌ ಹೇಳಿದರು.

ಮನರೇಗಾ ಬರುವುದಕ್ಕೂ ಮೊದಲು ಗ್ರಾಮ ಪಂಚಾಯತಿಗಳನ್ನು ಕೇಳುವರಿರಲಿಲ್ಲ. ಕರೆಂಟ್ ಬಿಲ್ ಕಟ್ಟೋಕು ಪರದಾಡುತ್ತಿದ್ದ ಗ್ರಾಮ ಪಂಚಾಯತಿಗಳು ಮನರೇಗಾ ಬಂದ ಮೇಲೆ ಸಾಕಷ್ಟು ಸುಧಾರಣೆ ಕಂಡಿವೆ. ಇದರ ಫಲವಾಗಿ ಇಂದು ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಲು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಕೇಂದ್ರ ಸರಕಾರವು ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಲು‌ ಹೊರಟಿದೆ. ಕೇಂದ್ರ ಸರಕಾರಕ್ಕೆ ರೈತರ, ಮಹಿಳೆಯರು, ಕೂಲಿ ಕಾರ್ಮಿಕರ ಬಗ್ಗೆ ಚಿಂತೆ ಇಲ್ಲ.‌ ಕೇವಲ ಬಂಡವಾಳ ಶಾಹಿಗಳ ಪರ ನಿಂತಿದೆ. ಯಾರನ್ನೂ ಸಂಪರ್ಕಿಸದೇ ತರಾತುರಿಯಲ್ಲಿ ಕೇವಲ 8 ಗಂಟೆಗಳಲ್ಲಿ ಚರ್ಚೆ ನಡೆಸಿ‌ ಈ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ಸಚಿವರು ದೂರಿದರು.

ಎಐಸಿಸಿ ಅಧ್ಯಕ್ಷರಿಗೆ ಅವಮಾನ :

ಗಣರಾಜ್ಯೋತ್ಸವ ಸಮಾರಂಭದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಮೂರನೇ ಸಾಲಿನಲ್ಲಿ ಕುರಿಸಿ ಅವಮಾನ ಮಾಡಲಾಗಿದೆ. ನಮ್ಮ ಸರಕಾರಗಳ ಅವಧಿಯಲ್ಲಿ ವಿರೋಧ ಪಕ್ಷದವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು. ಆದರೆ, ಕೇಂದ್ರದ ಬಿಜೆಪಿ ಸರಕಾರ ವಿರೋಧ ಪಕ್ಷದವರನ್ನು ಸರಿಯಾಗಿ ನಡೆಸಿಕೊಳ್ಳದೇ ಅವಮಾನಿಸಲಾಗಿದೆ. ಕೇಂದ್ರ ಸರಕಾರಕ್ಕೆ ಧಿಕ್ಕಾರವಿರಲಿ ಎಂದು ಆರೋಪಿಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಸಚಿವ ಸಂಪುಟ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ, ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News