×
Ad

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿ ಗಣರಾಜ್ಯೋತ್ಸವ

ಮಂತ್ರಮುಗ್ಧಗೊಳಿಸಿದ ಸಂಕ್ರಾಂತಿ ಸಂಭ್ರಮ, ಏಕೀಕರಣ ಮತ್ತು ನವಭಾರತ ರೂಪಕಗಳು

Update: 2026-01-26 21:02 IST

ಬೆಂಗಳೂರು: ಇಲ್ಲಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಸಮಾರಂಭದಲ್ಲಿ ಪ್ರದರ್ಶನಗೊಂಡ ‘ಸಂಕ್ರಾಂತಿ ಸಂಭ್ರಮ’ ಹಾಗೂ ‘ಭಾರತ ಏಕೀಕರಣ ಮತ್ತು ನವಭಾರತ’ ಎಂಬ ಶಾಲಾ ಮಕ್ಕಳ ನೃತ್ಯ ರೂಪಕಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಹೇರೋಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ಮಕ್ಕಳು ರೈತರ ಮತ್ತು ಹಳ್ಳಿ ಜನರ ವೇಷಭೂಷಣದೊಂದಿಗೆ ಮೈದಾನದಲ್ಲಿ ‘ಸಂಕ್ರಾಂತಿ ಸಂಭ್ರಮ’ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಮಕ್ಕಳು ಕಬ್ಬು, ಚಕ್ರ, ಕುಂಟೆಬಿಲ್ಲೆ ಸೇರಿದಂತೆ ಗ್ರಾಮೀಣ ಭಾಗದ ಸಾಂಪ್ರದಾಯಿಕ ಆಟಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಮಕರ ಸಂಕ್ರಾಂತಿ ಹಬ್ಬವು ಸ್ನೇಹ ಮತ್ತು ಸಹಬಾಳ್ವೆಯನ್ನು ಬೆಳೆಸುವ ಸಂದೇಶ ನೀಡುತ್ತದೆ. ಅದರಂತೆ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಸಹಬಾಳ್ವೆ ಸಂದೇಶವನ್ನು ಸಾರಿದರು. ಮಕ್ಕಳು ನಗರದ ಜನರಿಗೆ ಹುಲ್ಲಿನ ಹೊರೆ, ಹುಲ್ಲಿನ ಮನೆ, ಸೌದೆಯ ಹೊರೆ, ಕಂಕುಳಲ್ಲಿ ಬಿಂದಿಗೆ ಹೀಗೆ ದೈನಂದಿನ ಗ್ರಾಮೀಣ ಬದುಕಿನ ಪರಿಚಯವನ್ನು ಮಾಡಿಸಿದರು. ಆಕರ್ಷಕ ಗಾಳಿಪಟಗಳು ಆಕಾಶದಲ್ಲಿ ಹಾರಾಡಿದವು.

ಮನಸ್ಸಿಗೆ ಮುದ ನೀಡುವ ಈ ನೃತ್ಯ ರೂಪಕವನ್ನು ಹಿದಾಯತ್ ಅಹ್ಮದ್ ಅವರು ನಿರ್ದೇಶನ ಮಾಡಿದ್ದು, ನೃತ್ಯ ಸಂಯೋಜನೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಸಾಹಿತ್ಯವನ್ನು ರಾಜಶೇಖರ್ ಅವರು ಬರೆದಿದ್ದು, ಕರಿಬಸವ ತಡಕಲ್ ಸಂಗೀತವನ್ನು ಸಂಯೋಜಿಸಿದ್ದಾರೆ.

ಭಾರತ ಏಕೀಕರಣ ಮತ್ತು ನವಭಾರತ: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ‘ಭಾರತ ಏಕೀಕರಣ ಮತ್ತು ನವಭಾರತ’ ನೃತ್ಯ ರೂಪಕವು ಸ್ವಾತಂತ್ರ್ಯೋತ್ತರ ಭಾರತದ ಏಕೀಕರಕರಣ ಇತಿಹಾಸವನ್ನು ಒಳಗೊಂಡಿತ್ತು.

ಬಾಗಲಗುಂಟೆ ಸರಕಾರಿ ಪ್ರೌಢಶಾಲೆಯ 750 ಮಕ್ಕಳು ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು ಮತ್ತು ಬಿ.ಆರ್. ಅಂಬೇಡ್ಕರ್ ಸೇರಿದಂತೆ ಭಾರತದ ಏಕತೆಗೆ ಸಂಬಂಧಿಸಿದ ಮಹನೀಯರ ಭಾವಚಿತ್ರ ಹಿಡಿದು ಮೈದಾನದಲ್ಲಿ ತಮ್ಮ ಕಲಾಪ್ರದರ್ಶನ ನೀಡಿದರು.

ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ನಡೆಸಿಕೊಟ್ಟ ಕಾರ್ಯಕ್ರಮ ಇದ್ದಾಗಿದ್ದು, ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಿದ್ದು, ಸಂವಿಧಾನ ರಚನೆ ಸೇರಿ ನವಭಾರತವನ್ನು ಅನಾವರಣ ಮಾಡಿದರು. ಕೊನೆಯಲ್ಲಿ ಯಕ್ಷಗಾನ ಸೇರಿ ಕರ್ನಾಟಕದ ದೇಸಿ ಉಡುಪುಗಳನ್ನು ಧರಿಸಿದ್ದ ಮಕ್ಕಳು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ರಾಜ್ಯ ಸರಕಾರದ ಐದು ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳು ಗಾಂಧಿ ಕಂಡ ಕನಸಿನ ಭಾರತವನ್ನು ನನಸು ಮಾಡುತ್ತಿವೆ ಎಂದು ಶಾಲಾ ಮಕ್ಕಳು ‘ಭಾರತ ಏಕೀಕರಣ ಮತ್ತು ನವಭಾರತ’ ನೃತ್ಯ ರೂಪಕದಲ್ಲಿ ತೋರಿಸಿಕೊಟ್ಟರು.

ಇನ್ನು ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ನಡೆಸಿಕೊಟ್ಟ ‘ಸಾಮೂಹಿಕ ವಾದ್ಯಮೇಳ’ವು ಗಮನ ಸೆಳೆಯಿತು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಜೋಗದ ಸಿರಿ ಬೆಳಕಿನಲ್ಲಿ, ರಘುಪತಿ ರಾಘವ ರಾಜಾರಾಂ, ಬ್ಯಾಗ್‍ಪೈಪ್ ಬ್ಯಾಂಡ್ ಶೋ, ಸಾರೆ ಜಾಹಾ ಸೇ ಅಚ್ಚ ಗೀತೆಗಳನ್ನು ವಿವಿಧ ವಾದ್ಯತಂಡಗಳು ನುಡಿಸಿದವು.

ಸಮಾರಂಭದ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೆರೆದ ಜೀಪ್‍ನಲ್ಲಿ ಪೆರೇಡ್ ವೀಕ್ಷಣೆ ಮಾಡಿ ಗೌರವರಕ್ಷೆ ಸ್ವೀಕಾರ ಮಾಡಿದರು. ವಿವಿಧ ಶಾಲಾ ಮಕ್ಕಳು, ಗೃಹರಕ್ಷಕ ದಳ, ನಾಗರಿಕ ಸೇನೆ, ವಾಯುಸೇನೆ, ಸಿಆರ್‍ಪಿಎಫ್, ಎನ್‍ಸಿಸಿ, ಕೆಎಸ್‍ಆರ್‍ಪಿ ಸೇರಿ 37 ತುಕಡಿಗಳಲ್ಲಿ 1,100 ಮಂದಿ ಆಕರ್ಷಕ ಕವಾಯತಿನ ಪಥಸಂಚಲನದಲ್ಲಿ ಭಾಗಿಯಾದರು.

ಕೈದಿಗಳು ತಯಾರಿಸಿದ ತಿಂಡಿ ವಿತರಣೆ: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ತಯಾರಿಸಿದ ತಿಂಡಿಯನ್ನು ಸಮಾರಂಭಕ್ಕೆ ಆಗಮಿಸಿದ ಗಣ್ಯರು ಹಾಗೂ ಪ್ರೇಕ್ಷಕರಿಗೆ ವಿತರಿಸಲಾಯಿತು. ಕೈದಿಗಳು ತಯಾರಿಸಿದ ತಿಂಡಿಯ ಪಟ್ಟಣದ ಮೇಲೆ ನವ ಸಂಕಲ್ಪ ನವ ಜೀವನಕ್ಕೆ ಒಂದು ಅವಕಾಶ ಎಂದು ಮುದ್ರಿಸಲಾಗಿತ್ತು. ಎಚ್‍ಸಿಎಲ್ ಪ್ರತಿಷ್ಠಾನದಿಂದ ತಿಂಡಿ ತಯಾರಿಕೆ ಬಗ್ಗೆ ಕೈದಿಗಳಿಗೆ ತರಬೇತಿ ನೀಡಲಾಗಿತ್ತು.












 



 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News