×
Ad

ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ಮೋದಿಯ ಆಡಳಿತ ಸೂತ್ರಗಳೇ ಕಾರಣ: ಡಿ.ವಿ.ಸದಾನಂದ ಗೌಡ

Update: 2026-01-26 11:48 IST

ಬೆಂಗಳೂರು: ನಮ್ಮ ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಆಡಳಿತ ಸೂತ್ರಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದ ಅವರು ಮಾತನಾಡಿ, ಭಾರತವು ಪ್ರತೀ ಕ್ಷೇತ್ರದಲ್ಲೂ ಸ್ವಾಭಿಮಾನಿ ರಾಷ್ಟ್ರವಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅದು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿದೆ. ಮಾವಿನ ಹಣ್ಣು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಹಾಗೂ ಆಹಾರೋತ್ಪನ್ನಗಳನ್ನು ನಾವು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಚಂದ್ರಯಾನದಲ್ಲೂ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದವರು ಸಂವಿಧಾನಕ್ಕೆ ಅಪಚಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನಬದ್ಧವಾದ ವೇದಿಕೆಯನ್ನು ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಲು ಬೇಕಾದ ಪ್ರಯತ್ನಗಳನ್ನು ಮಾಡಿದ್ದಾರೆ. ಇದನ್ನು ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ಹೇಳಿದರು

ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಇಡೀ ರಾಜ್ಯದ ಜನತೆ ಖಂಡಿಸಬೇಕಾದ ದಿನವಿದು ಎಂದು ಹೇಳಿದರು

ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ನಮ್ಮದೇ ಆದ ಆರ್ಥಿಕ ನೀತಿ, ರಾಜಕೀಯ ನೀತಿ, ನಮ್ಮದೇ ಆದ ಸಾಮಾಜಿಕ- ಶೈಕ್ಷಣಿಕ, ಧಾರ್ಮಿಕ, ಕೈಗಾರಿಕಾ ನೀತಿಯನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಲು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿ ಎಂದರು.

ಕರ್ನಾಟಕದ ಆಡಳಿತ ವ್ಯವಸ್ಥೆಯ, ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಈ ಹಿನ್ನೆಲೆಯಲ್ಲಿ ನಾವು ನೀವು ಗಂಭೀರವಾಗಿ ಯೋಚಿಸಬೇಕಿದೆ. ಇಲ್ಲಿಯೂ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅಬ್ದುಲ್ ಅಜೀಂ, ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನ್ ಗೌಡ, ರಾಜ್ಯ ವಕ್ತಾರ ಪ್ರಕಾಶ್ ಶೇಷ ರಾಘವಾಚಾರ್, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News