ಬೆಂಗಳೂರು : ಅರಣ್ಯ ಪ್ರದೇಶದಲ್ಲೇ ಹುಟ್ಟಿ ಬೆಳೆದವರು ಯಾರಾದರೂ ಇದ್ದರೆ ಅವರಿಗೆ ಅರಣ್ಯ ಮತ್ತು ಪರಿಸರ ಖಾತೆಯನ್ನು ಬಿಟ್ಟುಕೊಡುತ್ತೇನೆ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಗೊತ್ತಿಲ್ಲವೆಂದು ಶಾಸಕರೊಬ್ಬರು ಹೇಳಿದ್ದಾರೆ. ನಮ್ಮದು ಆನೇಕಲ್, ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಇದೆ. ಅಲ್ಲಿ ನಮ್ಮ ತೋಟ ಕೂಡ ಇದೆ, ಅಲ್ಲಿಗೆ ಕಾಡಾನೆಗಳು ಬರುತ್ತವೆ.ಅರಣ್ಯದಲ್ಲಿ ಹುಟ್ಟಿ, ಅರಣ್ಯದಲ್ಲಿ ಬೆಳೆದವರೇ ಮಂತ್ರಿಯಾದರೆ ಅಭ್ಯಂತರವಿಲ್ಲ. ನಾನು ಅರಣ್ಯ ಇಲಾಖೆ ಬಿಟ್ಟುಕೊಡುತ್ತೇನೆ ಎಂದರು.

ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ. ಅರಣ್ಯ ಮಂತ್ರಿಯಾಗಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಿದ್ದೇನೆ. ಇವಾಗ ಆಗುತ್ತಿರುವ ಸಾವು ನೋವು ಕಡಿಮೆ ಆಗಬೇಕೆಂದು ನಮ್ಮ ಗುರಿ ಎಂದ ಅವರು, ಶಾಸಕರು ನನಗಿಂತ ಮುಂದೆ ಹೋಗಿ ವಿಧಾನಸಭೆಯ ಸ್ಪೀಕರ್ ಭೇಟಿಯಾಗಿದ್ದಾರೆ. ಯಾವ ಅಧಿಕಾರಿಯೂ ನನ್ನನ್ನು ದಾರಿ ತಪ್ಪಿಸಿಲ್ಲ. ಏನೇ ನಿರ್ಣಯ ತೆಗೆದುಕೊಂಡರೂ ನಾನೇ ತೆಗೆದುಕೊಂಡಿದ್ದೇನೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನ.30ರಂದು ಕಾಡನೆ ಸ್ಥಳಾಂತರ ಬಗ್ಗೆ ಸಭೆಯಿದೆ. ಸಭೆಯ ತೀರ್ಮಾನ ನೋಡಿಕೊಂಡು ಆನೆಗಳ ಸ್ಥಳಾಂತರ ಬಗ್ಗೆ ನಿರ್ಧಾರ ಮಾಡುತ್ತೇವೆ. ಅರಣ್ಯ ಇಲಾಖೆಗೆ ಕಾಡು ಪ್ರಾಣಿಗಳು ಮುಖ್ಯ, ಜನರ ಜೀವನವೂ ಮುಖ್ಯ. ಎರಡನ್ನು ಗನದಲ್ಲಿಟ್ಟುಕೊಂಡು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಬೇಲೂರು ಆನೆ, ಚಿಕ್ಕಮಗಳೂರು ಆನೆ ಎನ್ನುವುದು ಇರಲ್ಲ. ಕಾಡು ಇರುವ ಎಲ್ಲ್ಲ ಕಡೆ ಓಡಾಡಿಕೊಂಡು ಇರುತ್ತವೆ. ಈಗ ಆನೆಗಳ ಎಲ್ಲಿ ಇವೆಯೋ ಅಲ್ಲಿ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor